ಮದ್ದೂರು: ಹಾಲಿನ ಉತ್ಪನ್ನಗಳು ಮತ್ತು ಹೈನುಗಾರಿಕೆ ಯಂತ್ರೋಪಕರಣಗಳ ಮೇಲೆ ಹಾಕಿರುವ ಜಿಎಸ್‌ಟಿ ರದ್ದುಪಡಿಸಲು ಆಗ್ರಹಿಸಿ ಮದ್ದೂರು ತಾಲೂಕು ಕಚೇರಿ ಎದುರು ಮದ್ದೂರು ತಾಲೂಕು ಹಾಲು ಉತ್ಪಾದಕ ರೈತರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಬುಧವಾರ ಪ್ರತಿಭಟಿಸಿದರು.
ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದ ನರೇಂದ್ರ ಮೋದಿ ಈಗ ರೈತರು ಉತ್ಪಾದಿಸುವ ಉತ್ಪನ್ನಗಳಿಗೆ ತೆರಿಗೆ ಹಾಕುವ ಮೂಲಕ ರೈತರ ನಷ್ಟವನ್ನು ದುಪ್ಪಟ್ಟು ಗೊಳಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ತೆರಿಗೆ ಹಾಕುವುದಿಲ್ಲ ಎಂದು ಸಂಸತ್ತಿನಲ್ಲಿ ನೀಡಿದ್ದ ಭರವಸೆಗೆ ವಿರುದ್ಧವಾಗಿ ಜಿಎಸ್‌ಟಿ ಹಾಕುವ ಮೂಲಕ ವಚನ ದ್ರೋಹ ಎಸಗಿದ್ದಾರೆ. ಜಿಲ್ಲೆಯ ಜನರು ತಮ್ಮ ಜೀವನೋಪಾಯಕ್ಕೆ ಹೈನುಗಾರಿಕೆ ಅವಲಂಬಿಸಿದ್ದಾರೆ. ಈಗಾಗಲೇ ನಷ್ಟದಲ್ಲಿರುವ ಜಿಲ್ಲೆಯ ಹೈನುಗಾರಿಕೆಯನ್ನು ಜಿಎಸ್‌ಟಿ ತೆರಿಗೆ ಸಂಪೂರ್ಣವಾಗಿ ಮುಳುಗಿಸಿ, ಜಿಲ್ಲಾ ಹಾಲು ಒಕ್ಕೂಟವನ್ನು ಮುಚ್ಚುವಂತಹ ಪರಿಸ್ಥಿತಿ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.