ಕೆ.ಎಂ.ದೊಡ್ಡಿ: ಮದ್ದೂರು ವಿಧಾನ ಸಭಾ ಕ್ಷೇತ್ರವು ಅಭಿವೃದ್ಧಿಯಲ್ಲಿ ಇಪತ್ತು ವರ್ಷಗಳ ಹಿಂದೆ ಉಳಿದಿದ್ದು, ಸಮಗ್ರ ಪ್ರಗತಿಗೆ ವಿಶೇಷ ಅನುದಾನದೊಂದಿಗೆ ನೀಲಿನಕ್ಷೆ ತಯಾರಿಸಿದ್ದೇನೆ ಎಂದು ಶಾಸಕ ಕದಲೂರು ಉದಯ್ ಮಾಹಿತಿ ನೀಡಿದರು.
ಸಮೀಪದ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ಸುಮಾರು 5 ಕೋಟಿ ರೂ.ವೆಚ್ಚದಲ್ಲಿ ಲೋಕಸರ ನಾಲೆ ವ್ಯಾಪ್ತಿಯಲ್ಲಿ ಬರುವ ಕಾಡುಕೋತ್ತನಹಳ್ಳಿ, ಅರೆಚಾಕನಹಳ್ಳಿ ಗ್ರಾಮಗಳ ಅಚ್ಚುಕಟ್ಟು ವ್ಯಾಪ್ತಿಯ ನಾಲಾ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರೆವೇರಿಸಿ ಮಾತಾನಾಡಿದರು.
ಮದ್ದೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಸಂಕಲ್ಪದೊಂದಿಗೆ ಈಗಾಗಲೇ ಸರ್ಕಾರದಿಂದ ವಿಶೇಷ ಅನುದಾನ ತಂದು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ್ದೇನೆ. ಆ ನಿಟ್ಟಿನಲ್ಲಿ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲೂ ತುರ್ತಾಗಿ ಹಾಗಬೇಕಾಗಿರುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಹಂತ ಹಂತವಾಗಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಈ ಹಿಂದೆ ಜನರು ಒಬ್ಬ ಶಾಸಕನನ್ನು ಭೇಟಿಯಾಗಬೇಕಾದರೆ ಯಾರೋ ಒಬ್ಬ ಮುಖಂಡನ ಮೂಲಕ ಭೇಟಿ ಮಾಡಬೇಕಾಗಿತ್ತು. ಆದರೆ ನಾನು ಶಾಸಕನಾದ ಮೇಲೆ ವಾರದಲ್ಲಿ ಕನಿಷ್ಠ 5 ದಿನಗಳಲ್ಲಿ ಕ್ಷೇತ್ರದ ಜನತೆಗೆ ಸಿಗುತ್ತೇನೆ. ಅಲ್ಲದೆ ತಾಲೂಕಿನ ಜನತೆ ಯಾರೂ ಬೇಕಾದರೂ ಬಂದು ತಮ್ಮ ಅಹವಾಲು ಸಲ್ಲಿಸಬಹುದು ಎಂದು ತಿಳಿಸಿದರು.
ಈ ಹಿಂದೆ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮದ ಜನತೆ ರಸ್ತೆ, ಚರಂಡಿಗಳ ನಿರ್ಮಾಣ ಹಾಗೂ ಇನ್ನಿತರ ಕಾಮಗಾರಿಗಳ ಕುರಿತ ಅಹವಾಲು ಸಲ್ಲಿಸಿದ್ದಾರೆ. ನಾವು ಜನತೆಯ ಅಹವಾಲುಗಳನ್ನು ಪಟ್ಟಿ ಮಾಡಿ ಸಮಸ್ಯೆಗಳ ಪರಿಹಾರಕ್ಕಾಗಿ ಈಗಾಗಲೇ ಹಲವು ಕಾಮಗಾರಿಗಳನ್ನು ಪೂರ್ಣಗೊಳಿಸಿ ಇನ್ನಿತರ ಕಾಮಗಾರಿಗಳಿಗೆ ಸರ್ಕಾರದಿಂದ ವಿಶೇಷ ಅನುದಾನ ಕೋರಿದ್ದೇನೆ. ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿದ್ದು ವಿಶೇಷ ಅನುದಾನವನ್ನು ನೀಡುವುದಾಗಿ ತಿಳಿಸಿದೆ. ಶೀಘ್ರದಲ್ಲೇ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ರೈತರು ನೀರಾವರಿ ಸಮಸ್ಯೆ ಕುರಿತು ಹಲವು ಅಹವಾಲುಗಳನ್ನು ನೀಡಿದ್ದು ಕಾಲುವೆಗಳ ದುರಸ್ತಿ, ನಾಲೆಗಳ ನಿರ್ಮಾಣ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹಕಾರದಿಂದ ಸರ್ಕಾರದಿಂದ ಸುಮಾರು 300 ಕೋಟಿ ರೂ.ಗೂ ಹೆಚ್ಚಿನ ಅನುದಾನ ತಂದು ತಾಲೂಕಿನ ವಿವಿಧ ಭಾಗಗಳಲ್ಲಿ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲ ಭಾಗಗಳ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಗಳಿಗೆ ದುಡ್ಡಿಲ್ಲ ಎಂದು ಆರೋಪಿಸುತ್ತಿದ್ದಾರೆ. ನಾವು ಹಾಗೂ ನಮ್ಮ ಪಕ್ಷದ ಕಾರ್ಯಕರ್ತರು ಯಾವುದಕ್ಕೂ ಕಿವಿಗೊಡದೆ ಅಭಿವೃದ್ಧಿ ಕಾರ್ಯಗಳ ಮೂಲಕ ಅವರಿಗೆ ತಕ್ಕ ಉತ್ತರ ಕೊಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಎ.ಎಸ್. ರಾಜೀವ್, ತಾ.ಪಂ. ಮಾಜಿ ಅಧ್ಯಕ್ಷ ಕಪನೀಗೌಡ, ಗ್ರಾ.ಪಂ. ಅಧ್ಯಕ್ಷ ವೀರಭದ್ರು, ಉಪಾಧ್ಯಕ್ಷ ಲೋಕೇಶ್, ಮಾಜಿ ಅಧ್ಯಕ್ಷರಾದ ಸ್ವಾಮಿ, ದಯಾನಂದ್, ಸದಸ್ಯರಾದ ಕೆಂಪರಾಜು, ರುದ್ರಯ್ಯ, ಮಾಜಿ ಸದಸ್ಯ ರುದ್ರಯ್ಯ, ಮುಖಂಡರಾದ ಗೌಡಪ್ಪ, ಉದ್ಯಮಿ ಮಾದೇಗೌಡ, ಚಿದಂಬರ್ ಇತರರಿದ್ದರು.