ಮದ್ದೂರು: ಪಟ್ಟಣದ ಪೇಟೆ ಬೀದಿಯ ರಸ್ತೆ ವಿಸ್ತರಣೆ ಸಂಬಂಧ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೆ.10ರಂದು ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಶಾಸಕ ಕೆ.ಎಂ.ಉದಯ್ ಹಾಗೂ ಅಧಿಕಾರಿಗಳೊಂದಿಗೆ ಸೋಮವಾರ ಪಟ್ಟಣದ ಪೇಟೆ ಬೀದಿ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಟ್ಟಣದ ಪೇಟೆ ಬೀದಿ ಕಿರಿದಾಗಿರುವ ಕಾರಣ ವಾಹನ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಶಾಸಕ ಕೆ.ಎಂ.ಉದಯ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಸಂಬಂಧ ಪೌರಾಡಳಿತ ನಿರ್ದೇಶನಾಲಯ ಅಗತ್ಯ ಕ್ರಮ ಕೈಗೊಂಡು ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಸ್ತೆಯನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪಟ್ಟಣದ ಪೇಟೆ ಬೀದಿಯು ಪ್ರವಾಸಿ ಮಂದಿರದಿಂದ ಕೊಲ್ಲಿ ವೃತ್ತದವರೆಗೆ ಕೆಲವೆಡೆ 20 ಅಡಿ, ಇನ್ನು ಕೆಲವೆಡೆ 40 ಹಾಗೂ ಉಳಿದೆಡೆ 60 ಅಡಿ ಇದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ 100 ಅಡಿಗೆ ವಿಸ್ತರಣೆ ಮಾಡುವಂತೆ ಶಾಸಕ ಕೆ.ಎಂ.ಉದಯ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ರಸ್ತೆ ವಿಸ್ತರಣೆ ಸಂಬಂಧ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ಪಟ್ಟಣದ ಪೇಟೆ ಬೀದಿಯಲ್ಲಿ ಸಂಚಾರ ಮಾಡುವುದು ದುಸ್ತರವಾಗಿರುವ ಕಾರಣ 100 ರಸ್ತೆಯನ್ನು ಅಡಿಗೆ ವಿಸ್ತರಿಸಲು ಚಿಂತನೆ ನಡೆಸಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಅನುದಾನ ಬಿಡುಗಡೆಗೊಂಡ ತಕ್ಷಣ ರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ, ಲೋಕೋಪಯೋಗಿ ಇಲಾಖೆ ಇಇ ಹರ್ಷ, ಎಇಇ ದೇವಾನಂದ್, ಇಂಜಿನಿಯರ್ ಹನುಮಂತು, ಪುರಸಭಾ ಸದಸ್ಯ ಎಂ.ಬಿ.ಸಚಿನ್, ಮುಖ್ಯಾಧಿಕಾರಿ ಎಂ.ಮೀನಾಕ್ಷಿ ಇತರರು ಇದ್ದರು.