ಶಿವಮೊಗ್ಗ ಸಾಗರ ರಸ್ತೆಯ ಎಂಎಡಿಬಿ ಕಚೇರಿಯಲ್ಲಿ ನೂತನ ದಿನಚರಿಯನ್ನು ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಬಿಡುಗಡೆಗೊಳಿಸಿದರು. ಎಸ್.ಕೆ.ಮರಿಯಪ್ಪ, ಮೊಹಮ್ಮದ್ ನಜೀರ್, ಹನುಮಾನಾಯ್ಕ್, ಶಿವಾನಂದ ಕುದ್ರಿ, ವಿಜಯಕುಮಾರ್ ಇದ್ದರು. 
ಜಿಲ್ಲೆ

ಮಾರ್ಚ್ ಅಂತ್ಯದೊಳಗೆ ಎಂಎಡಿಬಿ ಕಾಮಗಾರಿಗಳು ಪೂರ್ಣ

ಶಿವಮೊಗ್ಗ: ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಈಗಾಗಲೇ ಮಂಜೂರಾಗಿರುವ ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.

ಸಾಗರ ರಸ್ತೆಯ ಎಂಎಡಿಬಿ ಕಚೇರಿಯಲ್ಲಿ ಗುರುವಾರ ಮಂಡಳಿಯ 2025ನೇ ಸಾಲಿನ ದಿನದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿ, ಕಳೆದ ಸಾಲಿನಲ್ಲಿ ಮಂಜೂರಾದ 954 ಕಾಮಗಾರಿಗಳ ಪೈಕಿ 335 ಕಾಮಗಾರಿಗಳು ಪೂರ್ಣಗೊಂಡಿವೆ. ಪೂರ್ಣಗೊಂಡ ಕೆಲ ಕಾಮಗಾರಿಗಳಿಗೆ ಪಾವತಿಯೂ ಆಗಿದೆ. 282 ಕಾಮಗಾರಿಗಳಿಗೆ ಅನುಮೋದನೆ ನೀಡಿ ಏಜೆನ್ಸಿ ನಿಗದಿಗೊಳಿಸಲಾಗಿದೆ. ಮಾರ್ಚ್‌ನೊಳಗೆ ಬಾಕಿ ಉಳಿದ ಕಾಮಗಾರಿಗಳು ಪೂರ್ಣವಾಗಬೇಕಿದೆ ಎಂದು ತಿಳಿಸಿದರು.

ಮಂಡಳಿಯಲ್ಲಿ 60ರಿಂದ 70 ಕೋಟಿ ರೂ. ಅನುದಾನ ಇದೆ. ಕಾಮಗಾರಿಗಳು ಶೀಘ್ರವಾಗಿ ಪೂರ್ಣವಾಗಬೇಕಿದೆ. ಈ ಸಂಬಂಧ ಶಾಸಕರಿಗೆ ಪತ್ರ ಬರೆಯಲಾಗಿದೆ. ಜಿಲ್ಲೆಯಲ್ಲಿ ಮಂಡಳಿಯಿಂದ ಕಾಲುಸಂಕಗಳು, ಪೆವಿಲಿಯನ್, ಕುಂದಾದ್ರಿ ಬೆಟ್ಟದ ಬಳಿ, ಹುಂಚದಲ್ಲಿ ರಸ್ತೆ ಕಾಮಗಾರಿಗಳು ಸೇರಿ 1,200 ಕಾಮಗಾರಿ ಪ್ರಗತಿಯಲ್ಲಿವೆ. ವೀಕ್ಷಣೆಗೆ ಜಿಲ್ಲಾ ಪ್ರವಾಸ ಕೈಗೊಳ್ಳಲಾಗುವುದು ಎಂದರು.

ಕಾಲುಸಂಕ, ಸೇತುವೆ ಮತ್ತು ಇತರ ಕಾಮಗಾರಿಗಳಿಗೆ 200 ಕೋಟಿ ರೂ. ನಬಾರ್ಡ್ ಅನುದಾನಕ್ಕೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಮಂಜೂರಾದಲ್ಲಿ ಮುಂದಿನ ವರ್ಷದಿಂದ ಕಾಮಗಾರಿ ಆರಂಭಿಸಲಾಗುವುದು. ಈ ಬಾರಿ ಪ್ರತಿ ಶಾಸಕರಿಗೆ ಮಂಡಳಿಯಿಂದ ತಲಾ 1 ಕೋಟಿ ರೂ. ಒದಗಿಸಲು ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೋರಲಾಗಿದೆ ಎಂದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಮಂಡಳಿ ಕಾರ್ಯದರ್ಶಿ ಮೊಹಮ್ಮದ್ ನಜೀರ್, ಅಧೀನ ಕಾರ್ಯದರ್ಶಿ ಹನುಮಾನಾಯ್ಕ್, ಉಪನಿರ್ದೇಶಕ ಶಿವಾನಂದ ಕುದ್ರಿ, ಕಾರ್ಯಪಾಲಕ ಅಭಿಯಂತ ವಿಜಯಕುಮಾರ್ ಇದ್ದರು.