ಜಿಲ್ಲೆ

ಮದನೂರು ಗ್ರಾ.ಪಂ. ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಅಂಗೀಕಾರ

ಯಲ್ಲಾಪುರ: ತಾಲೂಕಿನ ಮದನೂರು ಗ್ರಾ.ಪಂ. ಅಧ್ಯಕ್ಷರ ವಿರುದ್ಧ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದರು. 13 ಸದಸ್ಯರ ಪೈಕಿ ಅವಿಶ್ವಾಸದ ಪರ 10 ಮತಗಳು ಬಂದ ಹಿನ್ನೆಲೆಯಲ್ಲಿ ಅವಿಶ್ವಾಸ ನಿರ್ಣಯ ಅಂಗೀಕಾರಗೊಂಡಿತು.

ಉಪವಿಭಾಗಾಧಿಕಾರಿ ಕಾವ್ಯಾರಾಣಿ.ಕೆ.ವಿ ನೇತೃತ್ವದಲ್ಲಿ ಅವಿಶ್ವಾಸ ಗೊತ್ತುವಳಿ ಸಭೆ ಶುಕ್ರವಾರ ನಡೆಯಿತು. ಬಿಜೆಪಿ ಬೆಂಬಲಿತ 10 ಸದಸ್ಯರು ಹಾಲಿ ಅಧ್ಯಕ್ಷ ರಾಜೇಶ ತಿನೆಕರ್ ವಿರುದ್ಧ ಅವಿಶ್ವಾಸ ಬೆಂಬಲಿಸಿದರು. ಅಧ್ಯಕ್ಷ ತಿನೆಕರ್ ಸೇರಿ ಶಾಸಕ ಹೆಬ್ಬಾರ ಬೆಂಬಲಿತ ಮೂವರು ಸದಸ್ಯರು ಸಭೆಗೆ ಗೈರಾಗಿದ್ದರು.

ಅವಿಶ್ವಾಸ ನಿರ್ಣಯ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಸದ್ಯದಲ್ಲೇ ದಿನಾಂಕ ನಿಗದಿಪಡಿಸುವುದಾಗಿ ಉಪವಿಭಾಗಾಧಿಕಾರಿ ತಿಳಿಸಿದರು.

ಮೂರು ತಿಂಗಳ ಹಿಂದೆಯೇ ಅಧ್ಯಕ್ಷರ ವಿರುದ್ಧ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ನಿಯಮದ ಪ್ರಕಾರ ಅಧ್ಯಕ್ಷರ ಅವಧಿ 15 ತಿಂಗಳು ಪೂರೈಸಿದ ನಂತರ ಅವಿಶ್ವಾಸ ನಿರ್ಣಯಕ್ಕೆ ಅವಕಾಶವಿದ್ದು, ಆಗ 15 ತಿಂಗಳು ಪೂರ್ಣಗೊಳ್ಳದ ಕಾರಣಕ್ಕೆ ನಿರ್ಣಯ ಅಂಗೀಕಾರಗೊಂಡಿರಲಿಲ್ಲ. ಇದೀಗ 15 ತಿಂಗಳು ಕಳೆದಿದ್ದು, ನಿರ್ಣಯ ಅಂಗೀಕಾರಗೊಂಡಿದೆ.