ಜಿಲ್ಲೆ

ಸೌಲಭ್ಯ ದುರ್ಬಳಕೆ ಮಾಡಿದರೆ ಕ್ರಿಮಿನಲ್ ಕೇಸ್

Chitradurga

ಚನ್ನಗಿರಿ: ಫಲಾನುಭವಿಗಳು ಸರ್ಕಾರದ ಸೌಲಭ್ಯಗಳನ್ನು ಅನ್ಯರಿಗೆ ಮಾರಾಟ ಮಾಡಿದರೆ ಮತ್ತು ಬಳಕೆಗೆ ನೀಡಿದರೆ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಕೆಎಸ್‌ಡಿಎಲ್ ಅಧ್ಯಕ್ಷ, ಶಾಸಕ ಮಾಡಾಳು ವಿರೂಪಾಕ್ಷಪ್ಪ ಎಚ್ಚರಿಸಿದರು.

ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬುಧವಾರ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ 2018-19ನೇ ಸಾಲಿನ ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಕೊಳವೆಬಾವಿ ಸಲಕರಣೆ ವಿತರಿಸಿ ಮಾತನಾಡಿದರು.

ಸರ್ಕಾರ ಬಡತನದ ರೇಖೆಗಿಂತ ಕೆಳಗಿನ ಕುಟುಂಬಗಳ ಆರ್ಥಿಕ ಸ್ವಾವಲಂಬನೆಗಾಗಿ ಅರ್ಹರಿಗೆ ಸೌಲಭ್ಯಗಳನ್ನು ನೀಡುತ್ತದೆ. ಆದರೆ, ಫಲಾನುಭವಿಗಳು ಹಣದ ಆಸೆಗಾಗಿ ಬೇರೆಯವರಿಗೆ ಮಾರಾಟ ಮಾಡುವುದು ತಿಳಿದು ಬಂದಿದೆ. ಅಂಥವರು ಪತ್ತೆಯಾದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಅಧಿಕಾರಿಗಳು ಕರ್ತವ್ಯವನ್ನು ದೇವರ ಸೇವೆಯಂತೆ ಪ್ರಾಮಾಣಿಕವಾಗಿ ಮಾಡಿದರೆ ಎಲ್ಲಾ ಯೋಜನೆಗಳು ಶೇ.100ರಷ್ಟು ಯಶಸ್ಸು ಕಾಣುತ್ತವೆ ಎಂದು ಹೇಳಿದರು.

ಗಂಗಾ ಕಲ್ಯಾಣ ನಿಗಮದ ರಾಜ್ಯ ಉಪ ಪ್ರಧಾನ ವ್ಯವಸ್ಥಾಪಕ ಮಂಜುನಾಥ್, ಜಿಲ್ಲಾ ವ್ಯವಸ್ಥಾಪಕ ರಮೇಶ್, ತಾಲೂಕು ವ್ಯವಸ್ಥಾಪಕಿ ಹೇಮಲತಾ, ಬೆಸ್ಕಾಂ ಎಇಇ ಲೋಹಿತ್, ಸಂತೇಬೆನ್ನೂರು ವಿಭಾಗದ ಎಇಇ ಪ್ರವೀಣ್ ಇತರರಿದ್ದರು.

ನೀರಾವರಿ ಇಲಾಖೆಯಲ್ಲಿ ರಸ್ತೆ, ಚರಂಡಿ ನಿರ್ಮಿಸಲು 2.5 ಕೋಟಿ ರೂ. ಮೀಸಲಿದೆ. ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಈಗಾಗಲೇ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸಂಬಂಧಿತ ಸಚಿವರು ಹಾಗೂ ಅಧಿಕಾರಿಗಳ ಬಳಿ ಚರ್ಚೆ ಮಾಡಿ ಹಣವನ್ನು ಗಂಗಾ ಕಲ್ಯಾಣ ಯೋಜನೆಯಡಿ ಎಸ್ಸಿ, ಎಸ್ಟಿಗಳಿಗೆ ನೀಡಲಾಗುತ್ತದೆ.

ಮಾಡಾಳು ವಿರೂಪಾಕ್ಷಪ್ಪ, ಶಾಸಕ.