ಬೆಳಗಾವಿ ಡಿಸಿ ಕಚೇರಿ ಆವರಣದಲ್ಲಿ ವೀರ ಮದಕರಿ ಘರ್ಜನೆ ಸಂಘದ ಕಾರ್ಯಕರ್ತರು ಪ್ರತಿಭಟಿಸಿದರು. ಆನಂದ ಶಿರೂರ, ಆಕಾಶ ಕರೋಶಿ, ಉಮೇಶ ಹೊಸೂರ, ವಿಕಾಶ ಶಿರೂರ, ಎಂ.ಚೌಗುಲೆ ಮತ್ತಿತರರು ಇದ್ದರು. 
ಜಿಲ್ಲೆ

ಮದಕರಿ ಜಯಂತಿಗೆ ಸರ್ಕಾರಿ ರಜೆ ಘೋಷಿಸಿ

ಬೆಳಗಾವಿ: ವೀರ ಮದಕರಿ ಜಯಂತಿ ದಿನದಂದು ಸರ್ಕಾರಿ ರಜೆ ಘೋಷಿಸುವಂತೆ ಹಾಗೂ ಅವರ ಸ್ಮಾರಕ ನಿರ್ಮಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವೀರ ಮದಕರಿ ಘರ್ಜನೆ ಸಂಘದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನಮ್ಮ ನಾಡಿಗಾಗಿ ಹೋರಾಟ ಮಾಡಿರುವ ವೀರ ಮದಕರಿ ಅವರಿಗೆ ಗೌರವ ಸಲ್ಲಿಸಬೇಕಾದ ಅಗತ್ಯತೆ ಇದೆ. ಮಹಾನ್ ವ್ಯಕ್ತಿಗಳ ಜಯಂತಿ ದಿನದಂದು ರಜೆ ನೀಡಲಾಗುತ್ತದೆ.

ಆದರೆ, ವೀರ ಮದಕರಿ ಜಯಂತಿ ದಿನದಂದು ರಜೆ ನೀಡುತ್ತಿಲ್ಲ. ಜತೆಗೆ ಸ್ಮಾರಕ, ಮದಕರಿ ಅವರ ಪುತ್ಥಳಿ ನಿರ್ಮಾಣಕ್ಕೂ ಸಹ ಸರ್ಕಾರ ಮುಂದಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಅ. 13ರಂದು ನಡೆಯುವ ಮದಕರಿ ಜಯಂತಿಯಂದು ಸರ್ಕಾರಿ ರಜೆ ಘೋಷಿಸಬೇಕು. ಶ್ರೀರಂಗ ಪಟ್ಟಣದಲ್ಲಿ ಮದಕರಿ ನಾಯಕರ ಸ್ಮಾರಕ ನಿರ್ಮಾಣ ಮಾಡಬೇಕು. ಚಿತ್ರದುರ್ಗದಲ್ಲಿ ಥೀಮ್ ಪಾರ್ಕ್ ನಿರ್ಮಿಸಬೇಕು. ಬೆಳಗಾವಿಯಲ್ಲಿಯೂ ಸಹ ವೀರ ಮದಕರಿ ಅವರ ಪುತ್ಥಳಿ ಪ್ರತಿಷ್ಠಾಪಿಸಬೇಕು ಎಂದು ಮನವಿ ಮಾಡಿದರು. ಸಂಘದ ಅಧ್ಯಕ್ಷ ಆನಂದ ಶಿರೂರ, ಆಕಾಶ ಕರೋಶಿ, ಉಮೇಶ ಹೊಸೂರ, ವಿಕಾಸ ಶಿರೂರ, ಎಂ.ಚೌಗುಲೆ, ವಿನಾಯಮ ಬಿ. ಸೇರಿ ಇತರರು ಇದ್ದರು.