ಜಿಲ್ಲೆ

ಲಕ್ಷಾಂತರ ರೂ. ಬೆಲೆ ಬಾಳುವ ಯಂತ್ರ ಕಳವು

ಕೊಳ್ಳೇಗಾಲ: ತಾಲೂಕಿನ ತಿಮ್ಮರಾಜಿಪುರ ಗ್ರಾಮದ ಹೊರವಯದಲ್ಲಿರುವ ಮಾಜಿ ಶಾಸಕ ದಿ.ಎಸ್.ಜಯಣ್ಣ ಅವರ ಜಮೀನಿನ ಶೆಡ್‌ನಲ್ಲಿದ್ದ ರೇಷ್ಮೆ ನೂಲು ಬಿಚ್ಚುವ ಯಂತ್ರಕ್ಕೆ ಸಂಬಂಧಿಸಿದ ಲಕ್ಷಾಂತರ ರೂ.ಬೆಲೆ ಬಾಳುವ ಕಬ್ಬಿಣದ ಉಪಕರಣಗಳನ್ನು ದುಷ್ಕರ್ಮಿಗಳು ಕದ್ದೊಯ್ದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ದಿ.ಎಸ್.ಜಯಣ್ಣ ಅವರು ಜಮೀನಿನಲ್ಲಿ 3 ವರ್ಷಗಳ ಹಿಂದೆ ರೇಷ್ಮೆ ನೂಲು ಬಿಚ್ಚುವ ಕಾರ್ಖಾನೆ ತೆರೆಯಲು ಶೆಡ್ ನಿರ್ಮಿಸಿದ್ದರು. ಕಾರ್ಖಾನೆ ತೆರೆಯಲು ಅಗತ್ಯವಿರುವ 1 ಕೋಟಿ ರೂ. ಮೌಲ್ಯದ ರೇಷ್ಮೆ ತೆಗೆಯುವ ಯಂತ್ರಗಳು, ಮೋಟರ್ ಹಾಗೂ ಉಕರಣಗಳನ್ನು ಚೀನಾದಿಂದ ತರಿಸಿ ದಾಸ್ತಾನು ಮಾಡಿದ್ದರು.

ಈ ನಡುವೆ ಎಸ್.ಜಯಣ್ಣ ಅವರ ನಿಧನದ ಬಳಿಕ 10 ದಿನಗಳ ಹಿಂದೆ ಭಾನುವಾರ ನಸುಕಿನಲ್ಲಿ ನಾಲ್ವರು ಕಳ್ಳರು ಬೈಕ್‌ನಲ್ಲಿ ಬಂದಿದ್ದು, ಶೆಡ್‌ಗೆ ತೆರಳಿ ಒಂದೊಂದಾಗಿ ಸಾಮಗ್ರಿಗಳನ್ನು ಬೈಕ್‌ಗಳಲ್ಲಿ ಕಳವು ಮಾಡುವಾಗ ಪಕ್ಕದ ಜಮೀನಿನ ರೈತ ಸ್ಕೂಟರ್‌ನಲ್ಲಿ ಬಂದಿದ್ದರಿಂದ ಬೆಳಕನ್ನು ಗಮನಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವೇಳೆ ಕಳವಿಗೆ ಬಳಸಿದ್ದ ಬೈಕ್ ಸ್ಥಳದಲ್ಲೆಯೇ ಬಿಟ್ಟು ಪರಾರಿಯಾಗಿದ್ದಾರೆ. ನಂತರ ರೈತ ಈ ವಿಷಯವನ್ನು ತಿಮ್ಮರಾಜಿಪುರ ಗ್ರಾಮಸ್ಥರು ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿಗೆ ತಿಳಿಸಿದ್ದಾರೆ.

ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಚೆಲುವರಾಜು, ಪ್ರಭಾರ ಎಸ್‌ಐ ಬಿ.ವಿ.ವರ್ಷಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.