ಜಿಲ್ಲೆ

ಕನಕಪುರ ಬಸ್​ ನಿಲ್ದಾಣದಲ್ಲಿ ಮಚ್ಚುಬಿಸಿ ಹಲ್ಲೆ!

ರೇಷ್ಮೆ ನಗರ ಡೆಸ್ಕ್

ಕನಕಪುರ: ತಾಲೂಕಿನಲ್ಲಿ ಚಾಕನಹಳ್ಳಿಯಲ್ಲಿ ಗೌರಮ್ಮ ಹಾಗೂ ಅಚ್ಚಲು ಗ್ರಾಪಂ ಮಾಜಿ ಅಧ್ಯಕ್ಷ ನಂಜೇಶ್​ ಬರ್ಬರ ಹತ್ಯೆ ಬೆನ್ನಲ್ಲೇ ನಗರದಲ್ಲಿ ಮಂಗಳವಾರ ಹಾಡಹಗಲೇ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಲಾಗಿದೆ.

ನಗರದ ಸಾರಿಗೆ ಬಸ್​ ನಿಲ್ದಾಣದಲ್ಲಿ ಕೋಡಿಹಳ್ಳಿ ಹೋಬಳಿ ದಿಂಬದಹಳ್ಳಿಯ ಮಾರೇಗೌಡ (53) ಅವರ ಮೇಲೆ ಅವರ ಸೋದರನ ಮಗ ಆದಿತ್ಯ(37), ಮತ್ತವನ ಸ್ನೇಹಿತ ಬನಶಂಕರಿಯ ಸಲ್ಮಾನ್​(19) ಮಾರಕಾಸಗಳಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾರೆ.

ದಿಂಬದಹಳ್ಳಿಯ ಸಹೋದರರಾದ ಮಾರೇಗೌಡ ಮತ್ತು ಮಲ್ಲಯ್ಯ ನಡುವೆ 2 ವರ್ಷಗಳಿಂದ ಜಮೀನಿನ ವಿಚಾರದಲ್ಲಿ ಕಲಹವಿತ್ತು. ಇದೇ ದ್ವೇಷಕ್ಕೆ ಮಲ್ಲಯ್ಯನ ಮಗ ಅಜಯ್​ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಇದು ಉಭಯ ಕುಟುಂಬದಲ್ಲಿ ಮತ್ತಷ್ಟು ದೇಷಕ್ಕೆ ಕಾರಣವಾಗಿತ್ತು. ಮಂಗಳವಾರ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರೇಗೌಡ ಕನಕಪುರ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಹಾಜರಾಗಿ ಗ್ರಾಮಕ್ಕೆ ವಾಪಸ್​ ತೆರಳಲು ಬಸ್​ನಿಲ್ದಾಣದಲ್ಲಿ ಮಧ್ಯಾಹ್ನ 2.30ರ ಸಮಯದಲ್ಲಿ ಕುಳಿತಿದ್ದರು.

ಈ ವೇಳೆ ಆರೋಪಿಗಳು ಮಚ್ಚಿನಿಂದ ತಲೆ ಮತ್ತು ಭುಜಕ್ಕೆ ಹೊಡೆದು ಪರಾರಿಯಾಗಿದ್ದಾರೆ. ಆದರೆ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಗಾಯಾಳುವನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.