ಜಿಲ್ಲೆ

ಮಾವು ಬೆಲೆ ಏರಿಕೆ ನಿರೀಕ್ಷೆಯಲ್ಲಿ ರಾಮನಗರ ಜಿಲ್ಲೆಯ ರೈತ

Ramanagara

ರಾಮನಗರ: ಕರೊನಾ ಆತಂಕದ ನಡುವೆಯೇ ಜಿಲ್ಲೆಯ ಮಾವು ಮಾರುಕಟ್ಟೆ ಚೇತರಿಕೆ ಹಾದಿ ಹಿಡಿದಿದ್ದು ರೈತ ಸಮುದಾಯ ಬೆಲೆ ಏರಿಕೆ ನಿರೀಕ್ಷೆಯಲ್ಲಿದೆ.

ಮಾರ್ಚ್ ಮಧ್ಯಭಾಗದಲ್ಲಿಯೇ ಜಿಲ್ಲೆಯ ಮಾವು ಮಾರುಕಟ್ಟೆಗೆ ಬರುವುದರಿಂದ ಈ ಬಾರಿ ಕರೊನಾ ಆಘಾತ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿತ್ತು. ಬಹುತೇಕ ಮಾರುಕಟ್ಟೆ ಬಂದ್ ಆಗಿದ್ದರ ಪರಿಣಾಮ ಬೆಳೆಗಾರರನ್ನು ಬೀದಿಗೆ ತಳ್ಳುವ ಆತಂಕ ಸೃಷ್ಟಿಸಿತ್ತು. ಆದರೆ ಸರ್ಕಾರದ ಕ್ರಮದಿಂದಾಗಿ ಸಾಗಾಣಿಕೆಗೆ ಅನುಕೂಲವಾಗಿರುವುದರಿಂದ ಕಳೆದ 10 ದಿನಗಳಿಂದ ನಿರಂತರವಾಗಿ ಮಾವು ಮಾರುಕಟ್ಟೆಗಳು ಚಟುವಟಿಕೆಯಿಂದ ಕೂಡಿವೆ.

ಹೊರ ರಾಜ್ಯಕ್ಕೆ ಹಣ್ಣು: ಸಾಮಾನ್ಯವಾಗಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಾದಾಮಿ ತಳಿಯ ಹಣ್ಣುಗಳನ್ನು ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಮೊದಲಿಗೆ ಮಾರುಕಟ್ಟೆಗೆ ರಾಮನಗರ ಮಾವು ಪ್ರವೇಶ ಪಡೆಯುವುದರಿಂದ, ಈ ಹಣ್ಣುಗಳನ್ನು ಹೊರ ರಾಜ್ಯಕ್ಕೆ ಹೆಚ್ಚಾಗಿ ರವಾನೆ ಮಾಡಲಾಗುತ್ತದೆ. ಆದರೆ ಕರೊನಾಂತಕದ ಹಿನ್ನೆಲೆಯಲ್ಲಿ ಮಾವು ಖರೀದಿ ಸ್ಥಗಿತಗೊಂಡಿತ್ತು. ಇದೀಗ ರಾಮನಗರ ಮತ್ತು ಚನ್ನಪಟ್ಟಣದ ಎಪಿಎಂಸಿಗಳ ಮಾವಿನ ಮಂಡಿ ಹಾಗೂ ರಾಮನಗರ ಖಾಸಗಿ ಮಾವಿನ ಮಂಡಿಗಳು ಆರಂಭಗೊಂಡಿರುವುದರಿಂದ ಪ್ರತಿದಿನ ಸರಾಸರಿ 350 ಟನ್‌ನಷ್ಟು ಮಾವು ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿ ಇತರ ರಾಜ್ಯಗಳಿಗೆ ರವಾನೆಯಾಗುತ್ತಿದೆ.

ಮೇ ಅಂತ್ಯದವರೆಗೂ ಇಳುವರಿ: ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಇಳುವರಿ ಶೇ.50 ಕುಸಿತ ಕಂಡಿದೆ. ಪ್ರತಿವರ್ಷ ಪೂರ್ಣ ಪ್ರಮಾಣದ ಇಳುವರಿ ಇದ್ದರೆ ಸರಾಸರಿ 3 ಲಕ್ಷ ಟನ್‌ವರೆಗೂ ಮಾವು ಮಾರುಕಟ್ಟೆ ಪ್ರವೇಶ ಮಾಡುತ್ತಿತ್ತು. ಆದರೆ ಈ ಬಾರಿ ಇದರ ಪ್ರಮಾಣ ಅರ್ಧದಷ್ಟು ಕುಸಿತ ಕಂಡಿದೆ. ಇದರ ಹೊರತಾಗಿಯೂ ಮೇ ಅಂತ್ಯದವರೆಗೂ ಮಾವು ಮಾರುಕಟ್ಟೆಗೆ ಬರುವ ನಿರೀಕ್ಷೆ ಇರುವುದರಿಂದ ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ತೇಜಿಯಾಗುವ ಸಾಧ್ಯತೆ ಹೆಚ್ಚಿದೆ.

ನಿರೀಕ್ಷಿತ ಬೆಲೆ ಇಲ್ಲ: ಮಾರುಕಟ್ಟೆ ಇದೀಗ ಚೇತರಿಕೆ ಕಾಣುತ್ತಿದೆಯಾದರೂ ನಿರೀಕ್ಷಿತ ಪ್ರಮಾಣದ ಬೆಲೆ ಇಲ್ಲ. ಬಾದಾಮಿ ಕೆ.ಜಿ.ಗೆ 35-40 ರೂ.ವರೆಗೆ ಮಾರಾಟವಾಗುತ್ತಿದ್ದು, ರೈತರು 80-100 ರೂ. ನಿರೀಕ್ಷೆಯಲ್ಲಿದ್ದರು. ಇದರ ಜತೆ ಇತರ ತಳಿಗಳ ಹಣ್ಣುಗಳ ಬೆಲೆ ಸಹ ಹೆಚ್ಚಿಗೆ ಇಲ್ಲ ಎನ್ನುವುದು ರೈತರ ಅಳಲು. ಇನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ತೋತಾಪುರಿ ಹಣ್ಣಿನ ಬೆಲೆ ಪಾತಾಳಕ್ಕೆ ಕುಸಿದಿದ್ದು, ಕೇವಲ 6-10 ರೂ.ಗೆ ಪ್ರತಿ ಕೆಜಿ ಕಾಯಿ ಮಾರಾಟವಾಗುತ್ತಿದೆ. ಒಟ್ಟಾರೆ ಮುಂದಿನ ದಿನಗಳಲ್ಲಿ ಮಾವು ಮಾರುಕಟ್ಟೆ ಚೇತರಿಕೆ ಹಾದಿ ಹಿಡಿಯಲಿದ್ದು, ರೈತರಿಗೆ ಒಂದಿಷ್ಟು ವರವಾಗಿ ಪರಿಣಮಿಸಲಿದೆ.

ಮಾರುಕಟ್ಟೆಗಳಲ್ಲಿ ಎಚ್ಚರ ಅಗತ್ಯ: ಮಾವು ಮಾರುಕಟ್ಟೆ ಆರಂಭಗೊಂಡಿದ್ದರೂ ಕರೊನಾತಂಕ ಹೆಚ್ಚಿದೆ. ಮಾರುಕಟ್ಟೆ ಬಳಿ ಹೆಚ್ಚಿನ ಪ್ರಮಾಣದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಅಲ್ಲದೆ, ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ರೈತರು ಮತ್ತು ಖರೀದಿದಾರರು ವಿಲರಾಗುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಎಪಿಎಂಸಿ ಆಡಳಿತ ಕ್ರಮ ಕೈಗೊಳ್ಳಬೇಕಿರುವುದು ಅಗತ್ಯವಾಗಿದೆ.

ಏನೂ ಇಲ್ಲದ ಸಂದರ್ಭದಲ್ಲಿ ಮಾವು ಮಾರಾಟ ಆಗುತ್ತಿರುವುದಷ್ಟೇ ಖುಷಿ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಬೆಲೆ ಇಲ್ಲ. ಈಗಲೂ ರೈತ ನಷ್ಟವನ್ನೇ ಅನುಭವಿಸುತ್ತಿದ್ದು, ಇದಕ್ಕೆ ಸರ್ಕಾರ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಎಸ್. ಸಿದ್ದರಾಜು ರೈತ, ಕಗ್ಗಲಹಳ್ಳಿ ಸದ್ಯದ ಮಟ್ಟಿಗೆ ಮಾವು ಮಾರುಕಟ್ಟೆ ಚೇತರಿಕೆ ಹಾದಿ ಹಿಡಿದಿದೆ. ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 300 ಟನ್ ಮಾವು ಹೊರ ರಾಜ್ಯಗಳಿಗೆ ರವಾನೆಯಾಗುತ್ತಿದೆ. ಮೇ ಅಂತ್ಯದವರೆಗೂ ಹಣ್ಣು ಮಾರುಕಟ್ಟೆಗೆ ಬರುವ ನಿರೀಕ್ಷೆ ಇರುವುದರಿಂದ ಮುಂದಿನ ದಿನಗಳಲ್ಲಿ ಬೆಲೆ ಚೇತರಿಕೆ ಕಾಣಲಿದೆ. ಜೆ.ಗುಣವಂತ್, ಉಪನಿರ್ದೇಶಕರು, ತೋಟಗಾರಿಕೆ ಇಲಾಕೆ, ರಾಮನಗರ