ಜಿಲ್ಲೆ

ಆನ್‌ಲೈನ್ ಯಕ್ಷ ‘ಮಾತಿನ ಮಂಟಪ’ಕ್ಕೆ 50ರ ಸಂಭ್ರಮ

ವೇಣುವಿನೋದ್ ಕೆ.ಎಸ್. ಮಂಗಳೂರು

ಎಲ್ಲ ರಂಗದಂತೆ ಯಕ್ಷರಂಗಕ್ಕೂ ಮಾರ್ಚ್‌ನಲ್ಲಿ ಕರೊನಾ ಹೊಡೆತ ಬಿತ್ತು. ಯಕ್ಷಗಾನದ ಮೇಳಗಳು ತಿರುಗಾಟ ನಿಲ್ಲಿಸಿದವು. ಎಲ್ಲವೂ ಸ್ತಬ್ದ... ಆದರೆ ಯಕ್ಷಗಾನದ ಚಲನಶೀಲತೆಯನ್ನು ಮುಂದೆ ಕೊಂಡೊಯ್ಯಬಲ್ಲ ವಿಚಾರದ ಬಗ್ಗೆ ಅಕಾಡೆಮಿಕ್ ಆಗಿ ಚಿಂತಿಸಬೇಕಾದ ಯಕ್ಷಗಾನ ಅಕಾಡೆಮಿ ಏನು ಮಾಡುತ್ತಿದೆ ಎಂಬ ಪ್ರಶ್ನೆಗಳು ಉದ್ಭವಿಸತೊಡಗಿತು.

ಅದಕ್ಕೆ ಉತ್ತರವಾಗಿ ಆ.29ರಂದು ತೆಂಕುತಿಟ್ಟು ಭಾಗವತ ಪುತ್ತೂರು ರಮೇಶ್ ಭಟ್ಟರೊಂದಿಗಿನ ಸಂವಾದದೊಡನೆ ಹುಟ್ಟಿಕೊಂಡ ಪ್ರತಿದಿನದ ಆನ್‌ಲೈನ್ ವೇದಿಕೆಯ ‘ಮಾತಿನ ಮಂಟಪ’ 50 ಕಂತುಗಳನ್ನು ಪೂರೈಸಿದೆ!

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಮತ್ತು ಸದಸ್ಯ ಸಂಚಾಲಕಿ, ಯಕ್ಷಗಾನ ಕಲಾವಿದೆಯೂ ಆಗಿರುವ ಆರತಿ ಪಟ್ರಮೆ ರೂಪಿಸಿದ ವಿಭಿನ್ನ ಸರಣಿ ಇದು. ಪ್ರತಿದಿನವೂ ಒಬ್ಬೊಬ್ಬ ಕಲಾವಿದರನ್ನು ಹುಡುಕಿ, ಅವರಿಗೆ ಆನ್‌ಲೈನ್ ಮಾತುಕತೆಯ ಶಿಷ್ಟಾಚಾರಗಳ ತರಬೇತಿ ನೀಡಿ, ಸಜ್ಜುಗೊಳಿಸುವ ಸವಾಲಿನೊಂದಿಗೆ ಶುರುವಾದ ಸರಣಿಯಿದು.

ಅಕಾಡೆಮಿ ಅವರೊಳಗೇ ಆನ್‌ಲೈನ್ ಸಂವಾದಗಳನ್ನು ನಡೆಸುವಂತಿಲ್ಲ, ಏನಿದ್ದರೂ ಸಾರ್ವಜನಿಕವಾದ ಕಾರ್ಯಕ್ರಮಗಳನ್ನಷ್ಟೇ ಮಾಡಬೇಕಿತ್ತು. ಆಗ ಏನು ಮಾಡುವುದು ಎಂಬ ಬಗ್ಗೆ ಅಕಾಡೆಮಿ ಅಧ್ಯಕ್ಷರು, ಸದಸ್ಯರು ಚರ್ಚಿಸುತ್ತಿದ್ದೆವು. ಆಗ ಪತಿ ಸಿಬಂತಿ ಪದ್ಮನಾಭ ತಮ್ಮ ಕಾಲೇಜಿನ ವೆಬಿನಾರ್‌ವೊಂದನ್ನು ಫೇಸ್‌ಬುಕ್ ಮೂಲಕವೂ ಲೈವ್ ಆಗಿ ಪ್ರಸಾರ ಮಾಡಿದ್ದು ನನಗೆ ಸ್ಫೂರ್ತಿ ಒದಗಿಸಿತು. ಅದೇ ಮಾದರಿಯಲ್ಲಿ ವಿದ್ವಾಂಸರಿಂದ ಪ್ರತಿದಿನ ಉಪನ್ಯಾಸ ಮಾಡಿಸಬಹುದು ಎಂಬ ಸಲಹೆ ಕೊಟ್ಟೆ. ಕೂಡಲೇ ಅಧ್ಯಕ್ಷರು ಒಪ್ಪಿಕೊಂಡರು ಎನ್ನುತ್ತಾರೆ ಆರತಿ.

ಆದರೆ ಅಧ್ಯಕ್ಷರು, ಉಪನ್ಯಾಸದ ಬದಲು ವೃತ್ತಿಪರ ಕಲಾವಿದರನ್ನೇ ಕರೆದು ಸಂವಾದ ನಡೆಸುವುದು ಉತ್ತಮ ಎಂಬ ಸೂಚನೆಯಿತ್ತರು. ವೃತ್ತಿಪರರಿಗೆ ಅವಕಾಶಗಳು ಕಡಿಮೆ ಸಿಗುತ್ತವೆ, ಯಾವಾಗಲೂ ಅವರು ವೃತ್ತಿರಂಗದಲ್ಲಿ ತೊಡಗಿಸಿರುವ ಕಾರಣ, ಈಗಿನ ಅವಕಾಶದಲ್ಲಿ ಅವರೇ ಸರಿಯಾದ ವ್ಯಕ್ತಿಗಳೆನ್ನುವುದು ನಮಗೆ ಅರಿವಾಯಿತು. ಹಾಗೆ ಸರಣಿ ಶುರುವಾಯಿತು ಎನ್ನುತ್ತಾರೆ.

ಈ ಸರಣಿ 100 ಮೀರಬೇಕು. ನಮ್ಮ ನಡುವೆ 90 ವರ್ಷ ದಾಟಿದ ಕಲಾವಿದರಿದ್ದಾರೆ. ಹಿರಿಯರಾದ ಕೋಳ್ಯೂರು ರಾಮಚಂದ್ರ ರಾಯರು, ಪಾತಾಳ ವೆಂಕಟ್ರಮಣ ಭಟ್ಟರು, ತಿಮ್ಮಣ್ಣ ಯಾಜಿ, ಲಕ್ಷ್ಮೀನಾರಾಯಣ ಭಾಗವತ, ಗೋವಿಂದ ಶೇರಿಗಾರ ಮುಂತಾದವರು ದೀವಟಿಗೆ ಯುಗದವರು, ಅವರ ಬಳಿ ಮಾಹಿತಿಯ ಭಂಡಾರವೇ ಇದೆ. ಅವರನ್ನು ಆನ್‌ಲೈನ್ ವೇದಿಕೆಗೆ ಸಿದ್ಧಪಡಿಸಿದರೆ ಹೆಚ್ಚು ಮೌಲ್ಯಯುತ ಮಾಹಿತಿಗಳು ಸಿಗಬಹುದು.

- ಪ್ರೊ.ಎಂ.ಎ.ಹೆಗಡೆ, ಅಧ್ಯಕ್ಷ, ಕರ್ನಾಟಕ ಯಕ್ಷಗಾನ ಅಕಾಡೆಮಿ

ತೆಂಕು, ಬಡಗು, ಮೂಡಲಪಾಯದ ಪ್ರಮುಖ ಕಲಾವಿದರು, ಅದರಲ್ಲೂ 25 ವರ್ಷದಷ್ಟು ಅನುಭವ ಇರುವ ಕಲಾವಿದರು, ತಜ್ಞರನ್ನು ಕರೆಸಿ ಮಾತುಕತೆ ನಡೆಸಲಾಗಿದೆ. ಚಿಂತನ ಮಂಥನ ವೇಳೆ ಅನೇಕ ಅಮೂಲ್ಯ ವಿಚಾರಗಳು, ಅಂಶಗಳು ಹೊರಬಂದಿವೆ. ಅವುಗಳೆಲ್ಲವೂ ಅಕಾಡೆಮಿಗೆ ಸಂಗ್ರಹ ಯೋಗ್ಯ. ಅಕಾಡೆಮಿಯ ಫೇಸ್‌ಬುಕ್, ಯೂಟ್ಯೂಬ್‌ಗಳಲ್ಲಿ ಸಂವಾದ ಅಪ್‌ಲೋಡ್ ಮಾಡಲಾಗಿದೆ.

ಆರತಿ ಪಟ್ರಮೆ, ಸದಸ್ಯ ಸಂಚಾಲಕಿ, ಯಕ್ಷಗಾನ ಅಕಾಡೆಮಿ