ಮಾನ್ವಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ತುಂಗಭದ್ರಾ ಅಭಿಯಾನ ಪೂರ್ವಭಾವಿ ಸಭೆಯನ್ನು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಉದ್ಘಾಟಿಸಿದರು. ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಚಲನಚಿತ್ರ ನಟ ವಿಷ್ಟುತೀರ್ಥ ಜೋಷಿ ಇತರರಿದ್ದರು. 
ಜಿಲ್ಲೆ

ತುಂಗಭದ್ರಾ ಉಳಿವಿಗೆ ಪಕ್ಷಾತೀತ ಬೆಂಬಲ ಅಗತ್ಯ

ಮಾನ್ವಿ: ತುಂಗಭದ್ರಾ ನದಿ ಉಳಿವಿಗೆ ರಾಜಕೀಯ ನಾಯಕರು ಪಕ್ಷಾತೀತವಾಗಿ ಹೋರಾಟ ಮಾಡಿ ಈ ಭಾಗದ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ಪಟ್ಟಣದಲ್ಲಿ ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ಮತ್ತು ರಾಯಚೂರಿನ ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿಯಿಂದ ಕಿಷ್ಕಿಂಧೆಯಿಂದ ಮಂತ್ರಾಲಯದವರೆಗೆ ನಡೆಯಲಿರುವ ಪಾದಯಾತ್ರೆಯ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.

ಹಲವು ವರ್ಷಗಳಿಂದ ಕೆಳಭಾಗದ ರೈತರಿಗೆ ನೀರಿನ ತೊಂದರೆ ಇದೆ. ಇದನ್ನು ಸರಿಪಡಿಸಲು ಕೈಗೊಂಡಿರುವ ಹೋರಾಟಕ್ಕೆ ಪಕ್ಷಾತೀತವಾಗಿ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಅಧ್ಯಕ್ಷ ಬಸವರಾಜ ಪಾಟೀಲ್ ವೀರಾಪುರ ಮಾತನಾಡಿ, ಈ ಭಾಗದಲ್ಲಿ ಅತಿ ಮಳೆಯಿಂದ ಬೆಳೆಹಾನಿ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ 2040 ರೊಳಗೆ ತುಂಗಭದ್ರಾ ನದಿ ಸಂಪೂರ್ಣ ಕಲುಷಿತವಾಗುವ ಸಾಧ್ಯತೆಯಿದೆ.

ತುಂಗಭದ್ರಾ ನದಿಯ ಮೂರು ಭಾಗಗಳಲ್ಲಿ ಪ್ರತ್ಯೇಕ ತೊಂದರೆಗಳಿದ್ದು, ಶೃಂಗೇರಿಯಿಂದ ಹರಿಹರ, ಹರಿಹರದಿಂದ ತುಂಗಭದ್ರಾ ಮತ್ತು ತುಂಗಭದ್ರಾದಿಂದ ರಾಯಚೂರುವರೆಗೂ ವಿಭಿನ್ನ ಸವಾಲುಗಳನ್ನು ಎದುರಿಸುತ್ತಿವೆ. ಮರಗಳು 30 ಸಾವಿರ ಲೀಟರ್ ನೀರನ್ನು ಹಿಡಿದು ನಂತರ ನದಿಗೆ ಬಿಡುವ ಕೆಲಸ ಮಾಡುತ್ತವೆ. ಆದರೆ, ಈ ಪ್ರಕ್ರಿಯೆಗೆ ಮರಗಳ ಕಡಿತದಿಂದ ಅಡ್ಡಿ ಉಂಟಾಗಿದೆ ಎಂದರು.

ಮಾಜಿ ಶಾಸಕ ಬಸನಗೌಡ ಬ್ಯಾಗವಾಟ ಪಾದಯಾತ್ರೆಯ ಆರಂಭದಿಂದ ಅಂತ್ಯವರೆಗೂ ಭಾಗವಹಿಸುವುದಾಗಿ ಘೋಷಿಸಿದರು. ಮಹಾದೇವ, ಚಲನಚಿತ್ರ ನಟ ವಿಷ್ಟುತೀರ್ಥ ಜೋಷಿ, ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಜಿಲ್ಲಾ ಸಂಚಾಲಕ ಎನ್. ಉದಯಕುಮಾರ ಸಾಹುಕಾರ ಹಾಗೂ ರೈತರು ಇದ್ದರು.