ಜಿಲ್ಲೆ

ಪೌರಕಾರ್ಮಿಕರನ್ನು ಖಾಯಂ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ; ಎಂ.ಶಿವಣ್ಣ ಭರವಸೆ

ಮಡಿಕೇರಿ: ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ/ ಹೊರಗುತ್ತಿಗೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರನ್ನು ಖಾಯಂ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಫಾಯಿ ಕರ್ಮಚಾರಿ ಆಯೋಗದ ರಾಜ್ಯ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಭರವಸೆ ನೀಡಿದರು.

ನಗರದ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾ.ಪಂ.ಗಳಲ್ಲಿ ಅರೆಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಖಾಯಂ ಮಾಡುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಲಾಗುವುದು. ಆ ನಿಟ್ಟಿನಲ್ಲಿ ಪೌರಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸಲು ಕ್ರಮವಹಿಸಲಾಗುವುದು. ಪೌರ ಕಾರ್ಮಿಕರ ಮಕ್ಕಳಿಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶ ಕಲ್ಪಿಸುವ ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಶಿಕ್ಷಣ ಪಡೆದವರಿಗೆ ಉದ್ಯೋಗಾವಕಾಶ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನಹರಿಸುವಂತಾಗಲು ಶೈಕ್ಷಣಿಕವಾಗಿ ಸಹಕಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು. ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸರ್ಕಾರಿ ಸಂಸ್ಥೆಗಳ ಜತೆಗೆ ಖಾಸಗಿ ಸಂಸ್ಥೆಗಳಲ್ಲೂ ಸಹ ಪೌರ ಕಾರ್ಮಿಕರು ದುಡಿಯುತ್ತಿದ್ದಾರೆ. ಅವರಿಗೆ ಕನಿಷ್ಠ ವೇತನ ತಲುಪುತ್ತಿದೆಯೇ ಎಂಬ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಯಾವುದೇ ಪೌರ ಕಾರ್ಮಿಕರು ವಂಚನೆಗೆ ತುತ್ತಾಗಬಾರದು. ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೂ ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್‌ನಿಂದಾಗಿ ಅಲ್ಲಲ್ಲಿ ಪೌರಕಾರ್ಮಿಕರು ಸಾವನ್ನಪ್ಪುತ್ತಿರುವುದು ಕಂಡು ಬರುತ್ತಿದೆ. ಸರ್ಕಾರದಿಂದ ಆಧುನಿಕ ಯಂತ್ರಗಳನ್ನು ನೀಡಿದ್ದು, ಅದನ್ನು ಬಳಸಿಕೊಳ್ಳಬೇಕು ಎಂದು ಎಂ.ಶಿವಣ್ಣ ಸಲಹೆ ಮಾಡಿದರು.

ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ಮಾಡಿ ಪೌರ ಕಾರ್ಮಿಕರು ಮೃತಪಡುವುದು ಕಂಡು ಬಂದಲ್ಲಿ ಅಧಿಕಾರಿಗಳು ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಆದ್ದರಿಂದ ಈ ಬಗ್ಗೆ ಹೆಚ್ಚಿನ ಎಚ್ಚರವಹಿಸಬೇಕು. ಪೌರ ಕಾರ್ಮಿಕರು ಆರ್ಥಿಕವಾಗಿ ಸಬಲರಾಗಬೇಕು. ಸರ್ಕಾರದ ಸೌಲಭ್ಯಗಳು ಅವರಿಗೆ ತಲುಪಬೇಕು. ಪೌರ ಕಾರ್ಮಿಕರ ಸಮಸ್ಯೆಗಳಿಗೆ ಕಾಲ ಮಿತಿಯಲ್ಲಿ ಸ್ಪಂದಿಸಬೇಕು. ಪೌರ ಕಾರ್ಮಿಕರನ್ನು ಮುಖ್ಯವಾಹಿನಿಗೆ ತರಲು ಪ್ರತಿಯೊಬ್ಬರೂ ಶ್ರಮಿಸಬೇಕಿದೆ ಎಂದು ಎಂ.ಶಿವಣ್ಣ ಅವರು ಹೇಳಿದರು.

ಪೌರ ಕಾರ್ಮಿಕರ ಮಕ್ಕಳಿಗೆ ಶಿಕ್ಷಣದ ಜತೆಗೆ ವೃತ್ತಿ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ತಳಮಟ್ಟದವರನ್ನು ಮುಖ್ಯವಾಹಿನಿಗೆ ತರಬೇಕು. ರಾಜ್ಯದಲ್ಲಿ ಪೌರ ಕಾರ್ಮಿಕರ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳು ತಲುಪಬೇಕು. ಕನಿಷ್ಠ ವೇತನ ದೊರೆಯಬೇಕು. ಸುರಕ್ಷಿತ, ಆಧುನಿಕ ಪರಿಕರಗಳನ್ನು ವಿತರಿಸಬೇಕು ಎಂದು ತಿಳಿಸಿದರು.

ಸಫಾಯಿ ಕರ್ಮಚಾರಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಬೇಕು. ಬೆಳಗ್ಗಿನ ಉಪಾಹಾರ ಕಲ್ಪಿಸಬೇಕು. ಉತ್ತಮ ಗ್ಲೌಸ್, ಗಂಬೂಟ್, ಮಾಸ್ಕ್ ಮತ್ತಿತರ ಆಧುನಿಕ ಪರಿಕರಗಳನ್ನು ನೀಡಬೇಕು ಎಂದು ಕೋಟೆ ಶಿವಣ್ಣ ಅವರು ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ನಾಗರಾಜು, ವೆಂಕಟೇಶ್, ಜಿಲ್ಲಾ ಸಮಿತಿ ಸದಸ್ಯರಾದ ಪಳನಿ ಪ್ರಕಾಶ್, ಸಫಾಯಿ ಕರ್ಮಚಾರಿ ಆಯೋಗದ ಸಂಪನ್ಮೂಲ ಅಧಿಕಾರಿ ರಘು, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ಪೌರಾಯುಕ್ತ ಎಸ್.ವಿ.ರಾಮದಾಸ್ ಇತರರು ಇದ್ದರು.