ಹೊನ್ನಾಳಿ: ಸಮಾಜ ನನಗೆ ಏನು ಕೊಟ್ಟಿದೆ ಎಂದು ಯೋಚಿಸುವ ಬದಲು ನಾನು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇನೆ ಎಂದು ಪ್ರತಿಯೊಬ್ಬ ವಿದ್ಯಾರ್ಥಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಮಾಜದ ಋಣ ತೀರಿಸಿದಾಗ ಮಾತ್ರ ವಿದ್ಯಾರ್ಥಿ ಜೀವನ ಸಾರ್ಥಕವಾಗುತ್ತದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಎ. ಉಮಾಪತಿ ಅವರ ತಂದೆ- ತಾಯಿ ಹೆಸರಿನಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೇವಲ ಅಂಕಗಳಿಸುವುದಕ್ಕಾಗಿ ಅಥವಾ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವ ಸಲುವಾಗಿ ಓದುವುದಕ್ಕಿಂತ ಮೌಲ್ಯಾಧಾರಿತ ಜೀವನ ನಡೆಸಲು, ಸನ್ಮಾರ್ಗದಲ್ಲಿ ಮುನ್ನಡೆದು ಸಮಾಜಮುಖಿ ಬದುಕು ನಡೆಸಲು ಹಾಗೂ ನೈತಿಕ ಶಿಕ್ಷಣ ಪಡೆದು ಸತ್ಪ್ರಜೆಯಾಗಲು ಶಿಕ್ಷಣ ಪಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಪಾಲಕರಿಗೆ ಎಷ್ಟೇ ಕಷ್ಟಗಳಿದ್ದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಅವರು ಸಹಕಾರಿಯಾಗಿದ್ದಾರೆ. ಮಗುವಿನ ಭವಿಷ್ಯಕ್ಕಾಗಿ ಇಡೀ ಬದುಕನ್ನೇ ಸವೆಸುವ ಜೀವಗಳೆಂದರೆ ಅದು ತಂದೆ- ತಾಯಿ. ಅವರನ್ನು ಚನ್ನಾಗಿ ನೋಡಿಕೊಳ್ಳಬೇಕು ಎಂದರು.
ಪೆಹಲ್ಗಾಮ್ ಪ್ರಕರಣಕ್ಕೆ ಪ್ರತೀಕಾರವಾಗಿ ನಮ್ಮ ವೀರ ಯೋಧರು ಪಾಕಿಸ್ತಾನಕ್ಕೆ ತಕ್ಕ ಬುದ್ಧಿ ಕಲಿಸಿದ್ದಾರೆ. ಯುದ್ಧ ಬೇಡವೆಂದು ಭಾರತದ ಮುಂದೆ ಮಂಡಿಯೂರುವಂತೆ ಮಾಡಿದ್ದಾರೆ. ಯೋಧರ ಈ ಸಾಧನೆಗೆ ಪಕ್ಷಾತೀತವಾಗಿ ತಿರಂಗಾಯಾತ್ರೆ ನಡೆಸಿ ಅವರಿಗೆ ಧನ್ಯವಾದ ಅರ್ಪಿಸುತ್ತಿದ್ದೇವೆ ಎಂದು ಹೇಳಿದರು.
ಪ್ರಾಚಾರ್ಯ ಡಾ. ಧನಂಜಯ್ ಮಾತನಾಡಿ, ಕಾಲೇಜಿನ ವಾತಾವರಣ ಸರಿ ಇದ್ದರೆ ಆ ಕಾಲೇಜಿನಲ್ಲಿ ಎಲ್ಲ ಚಟುವಟಿಕೆಗಳು ಕ್ರಿಯಾಶೀಲವಾಗಿರುತ್ತವೆ ಎಂದರು.
ಉಪನ್ಯಾಸಕ ರಾಘವೇಂದ್ರರಾವ್ ಮಾತನಾಡಿ, ಜ್ಞಾನಕ್ಕೆ ಆಧಾರವೇ ಒಳ್ಳೆ ಮನಸ್ಥಿತಿ, ಪ್ರತಿಭೆಯನ್ನು ಗುರುತಿಸಿ ಪೋ›ತ್ಸಾಹ ನೀಡುವುದು ರಾಜ ಮಹಾರಾಜರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಅಂತಹ ಮನಸ್ಥಿತಿಯಿಂದಲೇ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ತಂದೆ- ತಾಯಿ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರವನ್ನು ತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾಲಯ ಮಟ್ಟದಲ್ಲಿ ತೃತೀಯ ರ್ಯಾಂಕ್ ಪಡೆದ ವಿದ್ಯಾರ್ಥಿನಿ ಗಗನ ಮಾತನಾಡಿದರು. ಚೈತ್ರಾ, ಗಗನ ಹಾಗೂ ಕಲಾವತಿ ಅವರನ್ನು ಎಂ.ಪಿ. ರೇಣುಕಾಚಾರ್ಯ, ಉದ್ಯಮಿ ಎಚ್.ಎ. ಉಮಾಪತಿ ಹಾಗೂ ಪ್ರಾಚಾರ್ಯ ಡಾ. ಧನಂಜಯ್ ಸನ್ಮಾನಿಸಿದರು.
ಉಪನ್ಯಾಸಕರಾದ ಗೀತಾ, ರಾಘವೇಂದ್ರ, ಹರಾಳು ಮಹಾಬಲೇಶ್, ಅಶೋಕ್, ಗ್ರಂಥಪಾಲಕ ನಾಗರಾಜ್ ನಾಯ್್ಕ ಇತರರು ಇದ್ದರು.