ಜಿಲ್ಲೆ

ಎಂ.ಜಿ.ರಸ್ತೆಯಲ್ಲಿ ಜೆಸಿಬಿಗಳ ಗರ್ಜನೆ

ಎನ್.ವೆಂಕಟೇಶ್

ಹೆದ್ದಾರಿ ಪ್ರಾಧಿಕಾರ-ನಗರಸಭೆ ಜಂಟಿ ಕಾರ್ಯಾಚರಣೆ ಪೌರಾಯುಕ್ತ, ಎಸ್‌ಪಿ ನೇತೃತ್ವದಲ್ಲಿ ಒತ್ತುವರಿ ತೆರವು

ಚಿಂತಾಮಣಿ: ನಗರದ ಮುಖ್ಯರಸ್ತೆ ಮತ್ತು ಪಾದಚಾರಿ ಮಾರ್ಗಗಳ ಒತ್ತುವರಿಗೆ ತೆರವಿಗೆ ಒಂದು ದಶಕದ ನಂತರ ನಗರಸಭೆ ಮುಂದಾಗಿ ಯಶಸ್ವಿಯಾಗಿದ್ದು, ಹೆದ್ದಾರಿ ಪ್ರಾಧಿಕಾರ ಹಾಗೂ ನಗರಸಭೆ ಅಧಿಕಾರಿಗಳು ಬುಧವಾರ ಜಂಟಿ ಕಾರ್ಯಾಚರಣೆ ಕೈಗೊಂಡು ನಗರದ ಜನನಿಬಿಡ ಮತ್ತು ವಾಹನ ದಟ್ಟಣೆ ರಸ್ತೆಯಾದ ರಾಷ್ಟ್ರೀಯ ಹೆದ್ದಾರಿ 234ರ ಎಂ.ಜಿ.ರಸ್ತೆಯಲ್ಲಿ ಒತ್ತುವರಿ ತೆರವು ಗೊಳಿಸಿದರು.

ಬೆಳಗ್ಗೆಯೇ ಎಂ.ಜಿ. ರಸ್ತೆಯ ಬಾಗೇಪಲ್ಲಿ ವೃತ್ತದಿಂದ 3 ಜೆಸಿಬಿ ಯಂತ್ರಗಳು ಕಾರ್ಯಾಚರಣೆಗಿಳಿದವು. ಇಂದು ಮೂರನೇ ಹಂತದ ಕಾರ್ಯಾಚರಣೆಯಾಗಿದ್ದು, ಸುಗಮ ಸಂಚಾರಕ್ಕೆ ಬಹುತೇಕ ಅಂಗಡಿ ಮಾಲೀಕರು ಮುಖ್ಯರಸ್ತೆ ಮತ್ತು ಪಾದಚಾರಿ ಮಾರ್ಗ ಒತ್ತುವರಿ ಮಾಡಿದ್ದು ಸಮಸ್ಯೆಯಾಗಿತ್ತು. ಈಗಾಗಲೇ ಎರಡು ಹಂತದಲ್ಲಿ ತೆರವು ಕಾರ್ಯಾಚರಣೆ ಪೂರ್ಣಗೊಂಡಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ಮಲ್ಲಿಕಾರ್ಜುನ್ ಮಲಿಕೆರೆ ಮತ್ತು ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ, ಎಸ್‌ಪಿ ಕುಶಾಲ್ ಚೌಕ್ಸೆ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು.

ಒತ್ತುವರಿ ತೆರವಿಗೆ ನಗರಸಭೆ ಗಡುವು ನೀಡಿದ್ದರಿಂದ ಬಹುತೇಕ ಒತ್ತುವರಿದಾರರ ಸ್ವಯಂಪ್ರೇರಿತರಾಗಿ ತೆರವು ಮಾಡಿದ್ದರು. ಉಳಿದೆಡೆ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವು ಮಾಡಲಾಯಿತು. ಸದರಿ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಒತ್ತುವರಿ ಮಾಡಿ ಗೋಡೆ, ಮೆಟ್ಟಿಲು ನಿರ್ಮಾಣ ಹಾಗೂ ಅಳವಡಿಸಿದ್ದ ತಗಡಿನ ಷೀಟ್‌ಗಳನ್ನು ತೆರವು ಮಾಡಲಾಯಿತು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಗಳಾದ ನವೀನ್, ಅಜಿತ್ ಕುಮಾರ್ ಮತ್ತು ವೆಂಕಟರಣ, ನಗರಸಭೆ ಅಧ್ಯಕ್ಷ ಆರ್. ಜಗನ್ನಾಥ್, ಉಪಾಧ್ಯಕ್ಷೆ ರಾಣಿಯಮ್ಮ, ಜೆಇ ಪ್ರಸಾದರೆಡ್ಡಿ, ಆರೋಗ್ಯ ನಿರೀಕ್ಷಕರಾದ ಆರತಿ, ವಿಜಯಕುಮಾರ್, ಸಿ.ಕೆ.ಬಾಬು, ಎಎಸ್‌ಪಿ ರಾಜಾ ಇಮಾಮ್ ಖಾಸೀಮ್, ಡಿವೈಎಸ್‌ಪಿ ಮುರಳೀಧರ್, ಪಿಐಗಳಾದ ವಿಜಿಕುಮಾರ್, ಶಿವರಾಜು, ಪಿಎಸ್‌ಐಗಳಾದ ರಮೇಶ್, ಮಮತಾ, ನಾರಾಯಣಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ಪ್ರಕರಣ ಇತ್ಯರ್ಥವಾದ ಕೂಡಲೇ ಎಂ.ಜಿ.ರಸ್ತೆ ವಿಸ್ತರಣೆ

ಹೆದ್ದಾರಿ ಪ್ರಾಧಿಕಾರದ ಎಇಇ ಮಲ್ಲಿಕಾರ್ಜುನ್ ಮಾತನಾಡಿ, ಹೆದ್ದಾರಿ ಬದಿಯ ಚರಂಡಿ ಮತ್ತು ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿ ಅನೇಕರು ವ್ಯಾಪಾರ ನಡೆಸುತ್ತಿದ್ದರಿಂದ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಜತೆಗೆ ಅಪಘಾತಗಳು ಹೆಚ್ಚಾದ ಹಿನ್ನೆಲೆಯಲಿ ಒತ್ತುವರಿ ತೆರವು ಮಾಡಲಾಗಿದೆ ಎಂದು ಹೇಳಿದರು. ಕೆಲವು ಅಂಗಡಿಗಳ ಮಾಲೀಕರು ನ್ಯಾಯಾಲಯ ಮೊರೆ ಹೋಗಿರುವುದರಿಂದ ಎಂ.ಜಿ.ರಸ್ತೆ ವಿಸ್ತರಣೆಯಾಗಿಲ್ಲ. ಪ್ರಕರಣ ಇತ್ಯರ್ಥವಾದ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಪೌರಾಯುಕ್ತರ ಧನ್ಯವಾದ

ಪೌರಾಯುಕ್ತ ಜಿ.ಎನ್.ಚಲಪತಿ ಮಾತನಾಡಿ, ಇತ್ತೀಚೆಗೆ ನಗರದಲ್ಲಿ ಅಪಘಾತಗಳು ಹೆಚ್ಚಾಗಿ ಸಾವುನೋವು ಸಂಭವಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ನಗರಸಭೆ ಮತ್ತು ಪೊಲೀಸರತ್ತ ಬೊಟ್ಟು ಮಾಡುತ್ತಿದ್ದರು. ಹಾಗಾಗಿ ಒತ್ತುವರಿಗೆ ಕ್ರಮ ಕೈಗೊಳ್ಳಲಾಗಿದೆ. ಒತ್ತುವರಿ ತೆರವಿಗೆ ಸಹಕರಿಸಿದ ಎಲ್ಲ ವರ್ತಕರಿಗೂ ಧನ್ಯವಾದಗಳು ಎಂದು ಹೇಳಿದರು.

ಮತ್ತೆ ಕೆಲವು ಕಡೆ ಕಾರ್ಯಾಚರಣೆ

ಅಪಘಾತ ತಡೆಯಲು ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಗರದ ಎಲ್ಲ ಮುಖ್ಯರಸ್ತೆ ಅಕ್ಕಪಕ್ಕದಲ್ಲಿರುವ ಅಂಗಡಿ ಮಾಲೀಕರು ಒತ್ತುವರಿ ತೆರವು ಮಾಡುವಂತೆ ಜಿ.ಎನ್. ಚಲಪತಿ ಮನವಿ ಮಾಡಿದರು.

ಮುಂದಿನ ದಿನಗಳಲ್ಲಿ ಆಜಾದ್‌ಚೌಕ ರಸ್ತೆ, ಡೈಮಂಡ್ ಟಾಕೀಸ್ ರಸ್ತೆ ಸೇರಿ ಇತರ ರಸ್ತೆಗಳಲ್ಲೂ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಹೇಳಿದರು.