ಜಿಲ್ಲೆ

ರಕ್ತದಾನ ಮಾಡಿ, ಜೀವ ಉಳಿಸಿ

ಚನ್ನಗಿರಿ: ಅಪಘಾತಗಳು ಹೇಗೆ, ಎಲ್ಲಿ,ಯಾವಾಗ ನಡೆಯುತ್ತದೆ ಎಂದು ಯಾರಿಗೂ ತಿಳಿದಿರುವುದಿಲ್ಲ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸಲು ರಕ್ತಕ್ಕಾಗಿ ಅಲೆದಾಡುತ್ತೇವೆ. ಸರಿಯಾದ ಸಮಯದಲ್ಲಿ ರಕ್ತ ಸಿಗದೆ ಜೀವ ಹೋಗಿರುವ ಘಟನೆಗಳು ಬಹಳಷ್ಟಿವೆ. ಆದ್ದರಿಂದ ರಕ್ತದಾನ ಮಾಡಿ ಜೀವ ಉಳಿಸಿ ಎಂದು ಭೂ ನ್ಯಾಯ ಮಂಡಳಿ ಮಾಜಿ ನಿರ್ದೇಶಕ ಎಂ.ಜಿ.ಧನಂಜಯ್ ತಿಳಿಸಿದರು.

ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಬುಧವಾರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸೇವಾಭಾರತಿ ಅರಿವಿನ ಮನೆ, ತಾವರೆಕೆರೆ ಸೌಹರ್ದ ಸಹಕಾರಿ ಸಂಘ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ವಿಜ್ಞಾನ, ತಂತ್ರಜ್ಞಾನ ಮುಂದುವರಿದಿದೆ. ಜನರು ಸುಲಭವಾಗಿ ಚಂದ್ರಯಾನ, ಗೌರಿಶಿಖರವನ್ನು ಹತ್ತಿ ಇಳಿದಿದ್ದಾರೆ. ಆದರೆ ರಕ್ತವನ್ನು ಕೃತಕವಾಗಿ ಕಂಡುಹಿಡಿದು ಜೀವವನ್ನು ಉಳಿಸಿದ ಉದಾಹರಣೆಗಳು ಒಂದೂ ಇಲ್ಲ. ಸ್ವಯಂ ಪ್ರೇರಿತರಾಗಿ ದಾನ ಮಾಡಿದ ರಕ್ತವನ್ನು ಆಸ್ಪತ್ರೆಗಳಲ್ಲಿ ಸಂಗ್ರಹ ಮಾಡಿ, ಅಗತ್ಯವಿದ್ದವರಿಗೆ ನೀಡಲಾಗುತ್ತದೆ ಎಂದರು.

ರಕ್ತದಾನ ಮಾಡಿದವರ ಆರೋಗ್ಯ ಸರಿ ಇರುವುದಿಲ್ಲ, ರೋಗಗಳು ಬರುತ್ತವೆ ಎಂಬ ಅನೇಕ ಮೂಢನಂಬಿಕೆಗಳು ಇಂದಿಗೂ ಜನರಲ್ಲಿ ಇದೆ. ರಕ್ತ ನೀಡುವುದರಿಂದ ಹೃದಯಾಘಾತವಾಗುವುದಿಲ್ಲ, ಅನೇಕ ರೋಗಗಳನ್ನು ತಡೆಯುವ ಶಕ್ತಿ ದೇಹಕ್ಕೆ ಬರುತ್ತದೆ ಎಂದು ತಿಳಿಸಿದರು.

43 ಯೂನಿಟ್ ರಕ್ತವನ್ನು ಸಂಗ್ರಹ ಮಾಡಲಾಯಿತು. ಈ ವೇಳೆ 50 ಬಾರಿ ರಕ್ತದಾನ ಮಾಡಿದ ದೇವರಾಜ್ ಮತ್ತು ಭೋಜರಾಜ್​ರವರನ್ನು ಗೌರವಿಸಲಾಯಿತು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಖಜಿ ಅಮಿರುದ್ದಿನ್, ಆರೋಗ್ಯ ನಿರೀಕ್ಷಣಾಧಿಕಾರಿ ಡಾ. ಚೈತನ್ಯ, ಆಪ್ತಸಮಾಲೋಚಕ ರಾಘವೇಂದ್ರ, ತಾಲೂಕು ಪ್ರಮುಖ ದೇವರಾಜ್ ನೆಲ್ಲಿಹಂಕಲು, ಶಶ್ರೂಷಕರಾದ ಶೈಲಾ, ಕುಮಾರಿ, ಅಸೀಫಬಾನು, ರವಿಕುಮಾರ್, ನಾಗರಾಜ್ ಇದ್ದರು.