ವಿಜಯಪುರ: ಧರ್ಮ ಒಡೆದು ಸಿಎಂ ಆಗುವಂಥ ದರ್ದು ಸಚಿವ ಎಂ.ಬಿ. ಪಾಟೀಲರಿಗಿಲ್ಲ; ಕಾಂಗ್ರೆಸ್‌ನಲ್ಲಿ ಸಿಎಂ ಆಗಬೇಕಾದರೆ ಹೈಕಮಾಂಡ್ ಮನಸ್ಸು ಮಾಡಬೇಕಷ್ಟೆ ಎಂದು ಮಾಜಿ ಶಾಸಕ ರಾಜು ಆಲಗೂರ ಅವರು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿಗೆ ಟಾಂಗ್ ನೀಡಿದರು.
ಕಾಂಗ್ರೆಸ್ ಪಕ್ಷ ಧರ್ಮ ಒಡೆಯುತ್ತಿದೆ ಎಂದು ಸಂಸದ ರಮೇಶ ಜಿಗಜಿಣಗಿ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆದಿಯಾಗಿ ಅನೇಕರು ಆರೋಪ ಮಾಡುತ್ತಿದ್ದಾರೆ. ಆದರೆ, ಅಂಥ ಕೃತ್ಯ ಎಲ್ಲಿ ನಡೆದಿದೆ ಎಂಬುದನ್ನು ಸಾಬೀತುಪಡಿಸಬೇಕು. ಅದಕ್ಕಾಗಿ ಬಹಿರಂಗ ಚರ್ಚೆಗೆ ಸದಾ ಸಿದ್ಧ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಸವಾಲೆಸೆದರು.
ನಾವೆಲ್ಲ ಹಿಂದುಗಳೇ. ನಮ್ಮ ಜಾತಿ ಪ್ರಮಾಣ ಪತ್ರದಲ್ಲಿ ಹಿಂದು ಎಂದೇ ನಮೂದಾಗಿದೆ. ಇದೀಗ ದಲಿತರು ಬೌದ್ಧ ಎಂದು ಬರೆಯಿಸುತ್ತಿರುವುದು ನಿಜ. ಇನ್ನು ಎಂ.ಬಿ. ಪಾಟೀಲರ ವಿಚಾರದಲ್ಲಿ ಲಿಂಗಾಯತ ಎಂಬುವುದು ಅವರ ಅಸ್ಮಿತೆಯಾಗಿದೆ. ಆ ಕುರಿತು ಮಾತನಾಡುವುದು ತಪ್ಪೇ? ಸಿಎಂ ಆಗಲು ಧರ್ಮ ಒಡೆಯಬೇಕೆ? ಹಾಗಾದರೆ ಈ ಹಿಂದೆ ಬಿಜೆಪಿಯಿಂದ ಸಿಎಂ ಆಗಿರುವ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮತ್ತಿತರರೆಲ್ಲರೂ ಧರ್ಮ ಒಡೆದೇ ಸಿಎಂ ಆಗಿದ್ದಾರೆಯೇ? ಎಂದ ರಾಜು ಆಲಗೂರ ಅವರು, ಧರ್ಮ ಒಡೆಯುವ ಪ್ರಮೇಯ ಕಾಂಗ್ರೆಸ್‌ನಲ್ಲಿ ಉದ್ಭವಿಸುವುದೇ ಇಲ್ಲ ಎಂದರು.
ಕಾಂಗ್ರೆಸ್ ಸಂವಿಧಾನದ ಮೇಲೆ ನಂಬಿಕೆ ಇರಿಸಿದೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಆಡಳಿತ ನಡೆಸುತ್ತಿದೆ. ಬಿಜೆಪಿಗರಂತೆ ಮನುವಾದದ ಪ್ರಕಾರ ರಾಷ್ಟ್ರ ನಡೆಯಬೇಕೆಂಬ ಉದ್ದೇಶ ಹೊಂದಿಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯ ಇರಿಸಿಕೊಂಡು ಕಾಂಗ್ರೆಸ್ ಆಡಳಿತ ನಡೆಸುತ್ತಿದೆ ಎಂದರು.
ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳ ಮಾತಿನ ಹಿಂದೆ ಯಾರಿದ್ದಾರೆ? ತೆರೆಮರೆಯಲ್ಲಿ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಶ್ರೀಗಳ ಸತ್ಕಾರ್ಯಗಳಿಗೆ ನಮ್ಮ ಬೆಂಬಲ ಇದೆ. ಆದರೆ, ಅವರು ಮಾತನಾಡಿರುವ ಅಶ್ಲೀಲ ಪದಗಳಿಗೆ ನನ್ನ ವಿರೋಧವಿದೆ. ಸ್ವಾಮೀಜಿಗಳಾದಂಥವರು ಮಾತನಾಡುವ ಪದಗಳು ಅವಲ್ಲ. ಸಿದ್ದೇಶ್ವರ ಸ್ವಾಮೀಜಿ ಉದಾತ್ತ ಭಾವ ಬಿಟ್ಟು ಹೋಗಿದ್ದಾರೆ. ಅಂಥ ನಾಡಿನಲ್ಲಿ ಸ್ವಾಮೀಜಿಗಳು ಅಶ್ಲೀಲ ಪದ ಬಳಸುವುದು ಶೋಭೆ ತರುವುದಿಲ್ಲ ಎಂದರು.
ಇದೇ ಕನ್ಹೇರಿ ಶ್ರೀಗಳು ಮೋಹನ ಭಾಗವತ ಅವರ ಬಗ್ಗೆ, ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್. ಯಡಿಯೂರಪ್ಪ ಅಥವಾ ಆರ್‌ಎಸ್‌ಎಸ್ ಬಗ್ಗೆ ಅಶ್ಲೀಲ ಪದ ಬಳಸಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು? ಎಂ.ಬಿ. ಪಾಟೀಲರು ಬಸವಧರ್ಮ ನಂಬಿದವರು. ಬಸವಣ್ಣನವರು ಈ ನಾಡಿಗೆ ತಾತ್ವಿಕ ಸಿದ್ದಾಂತ ಕೊಟ್ಟವರು. ಸಮಾನತೆ ನೀಡಿದವರು. ಕಾಯಕ ತತ್ವ ಬಿಟ್ಟು ಹೋದವರು. ಅವರ ಧರ್ಮದ ಬಗ್ಗೆ ಮಾತನಾಡಿದರೆ ಅಪಪ್ರಚಾರ ಹೇಗಾಗುತ್ತದೆ? ಎಂದ ಆಲಗೂರ ಅವರು, ಕನ್ಹೇರಿ ಶ್ರೀಗಳಿಗೆ ನಿರ್ಬಂಧ ವಿಧಿಸಿರುವುದನ್ನು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಆದರೆ ನಿರ್ಬಂಧ ವಿಚಾರ ಮುಂದಿಟ್ಟುಕೊಂಡು ದಂಗೆಗೆ ಪ್ರೋತ್ಸಾಹ, ಪ್ರಚೋದನೆ ನೀಡುವ ಮಾತುಗಳನ್ನಾಡುತ್ತಿರುವುದು ಸರಿಯಲ್ಲ. ಸಹಬಾಳ್ವೆ, ಪ್ರೀತಿ, ವಿಶ್ವಾಸದ ಮೇಲೆ ನಂಬಿಕೆ ಇಡಬೇಕು. ದೊಣ್ಣೆ ತೆಗೆದುಕೊಂಡು ಏಳುವುದಲ್ಲ ಎಂದರು.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಗುತ್ತಿಗೆದಾರರು ಬೀದಿಗೆ ಬಂದು ನಿಂತಿದ್ದಾರೆ ಎಂಬ ಬಿಜೆಪಿಗರ ಟೀಕೆ ಹುರುಳಿಲ್ಲದ್ದು. ಗುತ್ತಿಗೆದಾರರು ಹಾಗೆ ಬೀದಿಗೆ ಬರಲು ಕಾರಣವೇ ಬಿಜೆಪಿ ಎಂದ ಆಲಗೂರ ಅವರು, ಬಬಲೇಶ್ವರ ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿಲ್ಲವೆಂದು ಹೇಳುವ ಗುರುಲಿಂಗಪ್ಪ ಅಂಗಡಿ ಬಬಲೇಶ್ವರಕ್ಕೆ ಹೋಗಿ ನೋಡಲಿ. ಅಲ್ಲಿನ ತೋಟಗಾರಿಕೆ ಬೆಳೆಯನ್ನೊಮ್ಮೆ ಕಣ್ತುಂಬಿಕೊಳ್ಳಲಿ. ಶಾಲೆ- ಕಾಲೇಜ್‌ಗೆ ಭೇಟಿ ನೀಡಲಿ ಎಂದರಲ್ಲದೇ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಣ ಬಳಕೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಅವಧಿಯಲ್ಲಾದ ಪ್ರಗತಿ ಕುರಿತು ಬಿಜೆಪಿಗರು ಬಹಿರಂಗ ಚರ್ಚೆಗೆ ಬರಲಿ ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ ಇದ್ದರು.