ಜಿಲ್ಲೆ

ಗೃಹ ನಿರ್ಮಾಣ ಸಂಘಕ್ಕೆ ಎಂ.ಬಿ.ಗಿರೀಶ್ ಅಧ್ಯಕ್ಷ

ಬೀರೂರು: ಗೃಹ ನಿರ್ಮಾಣ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಾರ್ಗದ ಎಂ.ಬಿ.ಗಿರೀಶ್ ಮತ್ತು ಉಪಾಧ್ಯಕ್ಷರಾಗಿ ಬಿ.ಎಂ.ಮಂಜುನಾಥ್ ಅವಿರೋಧ ಆಯ್ಕೆಯಾದರು.

12 ನಿರ್ದೇಶಕರ ಬಲದ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮಾರ್ಗದ ಎಂ.ಬಿ.ಗಿರೀಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಎಂ.ಮಂಜುನಾಥ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ರುಕ್ಮಿಣಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧವಾಗಿ ಘೋಷಿಸಿದರು. ನೂತನ ಅಧ್ಯಕ್ಷ ಮಾರ್ಗದ ಎಂ.ಬಿ.ಗಿರೀಶ್ ಮಾತನಾಡಿ, ಸಂಘದ ಎಲ್ಲ ನಿರ್ದೇಶಕರ ಮಾರ್ಗದರ್ಶನದಲ್ಲಿ ಸಂಘದ ಅಭಿವೃದ್ಧಿ ಗೆ ಶ್ರಮಿಸಲಾಗುವುದು. ಹೊಸ ಕಟ್ಟಡ ನಿರ್ಮಾಣ ಹಾಗೂ ಹಳೇ ಮನೆ ರಿಪೇರಿ ಮಾಡಿಸಲು ಸಾಲ ಸೌಲಭ್ಯ ಒದಗಿಸಲು ಮಹಾ ಮಂಡಳಿಗೆ ಒತ್ತಾಯಿಸಲಾಗುವುದು. ಬೈಲಾ ತಿದ್ದುಪಡಿ ಪ್ರಕಾರ ಬೇರೆ ಅವಕಾಶ ಸಿಕ್ಕಿದ್ದಲ್ಲಿ ಸೌಲಭ್ಯ ಕಲ್ಪಿಸಲು ಯತ್ನಿಸಲಾಗುವುದು ಎಂದರು. ನಿರ್ದೇಶಕರಾದ ವಿಶ್ವನಾಥ ಗೌಡ, ಎ.ಆರ್.ಪ್ರಕಾಶ್, ಎಚ್.ನಾಗರಾಜ್, ಬಿ.ಎಸ್.ಹರಿಪ್ರಸಾದ್, ಬಿ.ಎನ್.ನಾಗರತ್ನ, ಜಿ.ಎಸ್.ದ್ರಾಕ್ಷಾಯಿಣಿ, ಹೆಚ್.ವೆಂಕಟಗಿರಿಯಪ್ಪ, ಮಹಮ್ಮದ್ ರಸೂಲ್, ಎಂ.ಎಸ್.ನಾಗೇಂದ್ರ ಪ್ರಸಾದ್, ಬಿ.ಕೆ.ರಮೇಶ್, ಕಾರ್ಯದರ್ಶಿ ಷಡಾಕ್ಷರಿ ಇದ್ದರು.