ಜಿಲ್ಲೆ

ಮ. ಬೆಟ್ಟದಲ್ಲಿ ಸ್ವಚ್ಛತೆಗಾಗಿ ಜಾಗೃತಿ ಅಭಿಯಾನ

Mysuru - Desk - Ravikumar

ಚಾಮರಾಜನಗರ:ಪ್ಲಾಸ್ಟಿಕ್ ವಸ್ತು ಹಾಗೂ ಇನ್ನಿತರ ತ್ಯಾಜ್ಯವನ್ನು ಕಸದ ತೊಟ್ಟಿಯಲ್ಲಿ ಹಾಕುವ ಮೂಲಕ ಮಾದಪ್ಪನ ಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡುವಂತೆ ಮೈಸೂರು ಪರಿಸರ ವಾರಿಯರ್ಸ್‌ ತಂಡದ ಮಂಜುನಾಥ್ ಭಾನುವಾರ ಭಕ್ತರಲ್ಲಿ ಜಾಗೃತಿ ಮೂಡಿಸಿದರು.


ಕಳೆದ 2 ವರ್ಷದಿಂದಲೂ ಮ.ಬೆಟ್ಟ ಹಾಗೂ ನಾಗಮಲೆ ಶ್ರೀ ಕ್ಷೇತ್ರದಲ್ಲಿ ಅರಣ್ಯ ಸಂರಕ್ಷಣೆ ಹಾಗೂ ಏಕ ಬಳಕೆ ಪ್ಲಾಸ್ಟಿಕ್‌ಮುಕ್ತಕ್ಕಾಗಿ ತಂಡದ ವತಿಯಿಂದ ನಿರಂತರ ಅಭಿಯಾನ ಮಾಡಲಾಗುತ್ತಿದೆ. ಯುಗಾದಿ ಜಾತ್ರೆಯ ಅಂಗವಾಗಿ ಹೆಚ್ಚಿನ ಸಂಖ್ಯೆಯ ಭಕ್ತರು ಮ.ಬೆಟ್ಟಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆ ಮತ್ತೊಮ್ಮೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.


ಬೇಸಿಗೆ ಹಿನ್ನೆಲೆ ಅರಣ್ಯ ಪ್ರದೇಶ ಒಣಗಿದೆ. ತಾಳುಬೆಟ್ಟದಿಂದ ಕಾಲ್ನಡಿಗೆ ಮೂಲಕ ಆಗಮಿಸುವ ಬೆಂಗಳೂರು, ಹೊಸೂರು, ಅತ್ತಿಬೆಲೆ, ಆನೇಕಲ್ ಹಾಗೂ ಇನ್ನಿತರ ಕಡೆಯ ಭಕ್ತರು ಕಾಡಿಗೆ ಬೆಂಕಿ ಬೀಳದಂತೆ ನೋಡಿಕೊಳ್ಳಬೇಕಿದೆ. ಅಲ್ಲದೆ ಮೆಟ್ಟಿಲುಗಳ ಮಾರ್ಗದಲ್ಲಿ ಯಾವುದೇ ಕಾರಣಕ್ಕೂ ಕರ್ಪೂರ ಹಾಗೂ ಗಂಧದ ಕಡ್ಡಿ ಹಚ್ಚಬಾರದು ಎಂದು ಮಂಜುನಾಥ್ ತಿಳಿಸಿದರು. ಅಲ್ಲದೆ, ಪ್ಲಾಸ್ಟಿಕ್ ವಸ್ತುಗಳನ್ನು ಕಸದ ತೊಟ್ಟಿಯಲ್ಲಿ ಹಾಕುವಂತೆ ಮನವಿ ಮಾಡಿದರು.

ಬಳಿಕ ಅಂತರಗಂಗೆ ಕಲ್ಯಾಣಿ ಬಳಿ ತೆರಳಿ ಅಂತರಗಂಗೆಯ ಪಾವಿತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸೋಪು, ಶಾಂಪು ಹಾಗೂ ಗಂಧದಕಡ್ಡಿ ತ್ಯಾಜ್ಯವನ್ನು ಕಲ್ಯಾಣಿಗೆ ಬಿಸಾಡದಂತೆ ಹಾಗೂ ಸ್ವಚ್ಛತೆ ಕಾಪಾಡುವಂತೆ ಭಕ್ತರಲ್ಲಿ ಕೋರಿದರು.