*ಸುಳೇಭಾವಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಅನಾವರಣ*
*ಚುನಾವಣೆ ಸಂದರ್ಭದಲ್ಲಿ ಬಂದು ಹೋಗುವವರ ಬಗ್ಗೆ ಎಚ್ಚರವಿರಲಿ*
ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಮಹಾತ್ಮರ ಮೂರ್ತಿಗಳನ್ನು ಸ್ಥಾಪಿಸುವುದು ರಾಜಕೀಯ ಉದ್ದೇಶಕ್ಕಲ್ಲ, ಜನರನ್ನು ಖುಷಿಪಡಿಸಲೂ ಅಲ್ಲ. ಅವರ ಸಾಧನೆ ಹೋರಾಟ, ನಮ್ಮ ಮಕ್ಕಳಿಗೆ ಸ್ಫೂರ್ತಿಯಾಗಲಿ, ಈ ದೇಶದ ಸಂಸ್ಕೃತಿ ಉಳಿಯಲಿ ಎಂಬ ಕಾರಣಕ್ಕೆ ಮೂರ್ತಿ ಪ್ರತಿಷ್ಠಾಪಿಸುತ್ತಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಸುಳೇಭಾವಿ ಗ್ರಾಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಸ್ವಂತ ಹಣದಿಂದ ಪ್ರತಿಷ್ಠಾಪಿಸಿರುವ ಛತ್ರಪತಿ ಶಿವಾಜಿ ಮಹಾರಾಜರ ನೂತನ ಮೂರ್ತಿಯನ್ನು ಭಾನುವಾರ ಸಂಜೆ ಅನಾವರಣಗೊಳಿಸಿ ಅವರು ಮಾತನಾಡಿದರು.
ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ ಸಿಗಲಿ ಎಂಬುದೇ ನಮ್ಮ ಉದ್ದೇಶ. ಛತ್ರಪತಿ ಶಿವಾಜಿ, ಕಿತ್ತೂರು ಚೆನ್ನಮ್ಮ, ಜಗಜ್ಯೋತಿ ಬಸವೇಶ್ವರ, ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ಮಹಾತ್ಮರ ಜೀವನ ಆದರ್ಶವನ್ನು ನಮ್ಮ ಮಕ್ಕಳು ಮೈಗೂಡಿಸಿಕೊಳ್ಳಬೇಕು. ಅವರ ಜೀವನ ಚರಿತ್ರೆ ನಮ್ಮ ಮಕ್ಕಳಿಗೆ ಸ್ಫೂರ್ತಿ ತುಂಬಲಿ ಎನ್ನುವ ಕಾರಣಕ್ಕೆ ಅಂತವರ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಚುನಾವಣೆ 6 ತಿಂಗಳಿರುವಾಗ ಕೆಲವರು ಬಂದು ರಾಜಕಾರಣ ಮಾಡುತ್ತಾರೆ, ಹೋಗುತ್ತಾರೆ. ಆದರೆ ಈ ನಿಮ್ಮ ಲಕ್ಷ್ಮೀ ಹೆಬ್ಬಾಳಕರ ಚುನಾವಣೆಗಾಗಿ ಕೆಲಸ ಮಾಡುವವಳಲ್ಲ. ದಿನದ 24 ಗಂಟೆಗೆ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗಾಗಿಯೇ ಚಿಂತಿಸುತ್ತೇನೆ. ಬೇರೆಯವರು ಜಾತಿಗಳ ಮಧ್ಯೆ ಬೆಂಕಿ ಹಚ್ಚುತ್ತಾರೆ. ಚುನಾವಣೆ ಮುಗಿದ ಬಳಿಕ ನಾಪತ್ತೆಯಾಗುತ್ತಾರೆ. ಆದರೆ ನಾನು ಸುಳೇಭಾವಿ ಗ್ರಾಮದ ಮನೆ ಮಗಳಾಗಿ ನನ್ನೂರು ಎಂದು ಅನುದಾನ ತಂದು ಗ್ರಾಮದ ಅಭಿವೃದ್ಧಿ ಮಾಡಿದ್ದೇನೆ. ಊರು ಸುಧಾರಿಸಲು ಪಣ ತೊಟ್ಡಿದ್ದೇನೆ. ಎಲ್ಲ ಸಮುದಾಯಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇನೆ. ಸದಾ ಕಾಲ ನನ್ನದು ಅಭಿವೃದ್ಧಿ, ಅಭಿವೃದ್ಧಿ ಎಂದು ಹೇಳಿದರು.