ಜಿಲ್ಲೆ

ನವಮಂಗಳೂರು ಬಂದರಿಗೆ ಐಷಾರಾಮಿ ಪ್ರವಾಸಿ ಹಡಗು ಆಗಮನ

ಮಂಗಳೂರು: ಪಣಂಬೂರಿನ ನವಮಂಗಳೂರು ಬಂದರಿಗೆ ಪ್ರಸಕ್ತ ಸಾಲಿನ 5ನೇ ಐಷಾರಾಮಿ ಪ್ರವಾಸಿ ಹಡಗು ಎಂ.ಎಸ್.ನಾರ್ವೆಜಿನ್ ಸ್ಕೈ ಶನಿವಾರ ಆಗಮಿಸಿತು.

ವೆಸ್ಟ್ ಇಂಡೀಸ್‌ನ ದ್ವೀಪ ರಾಷ್ಟ್ರ ಬಹಮಾಸ್‌ನಿಂದ ಕೊಚ್ಚಿ ಬಂದರು ಮೂಲಕ ಮಂಗಳೂರು ಬಂದರಿಗೆ ಆಗಮಿಸಿದ 258.6 ಮೀ. ಉದ್ದದ ಈ ಐಷಾರಾಮಿ ಹಡಗಿನಲ್ಲಿ 1,876 ಪ್ರವಾಸಿಗರು ಮತ್ತು 861 ಸಿಬ್ಬಂದಿ ಬಂದಿಳಿದರು. ಕೋವಿಡ್ ಬಳಿಕ ಅತಿ ಹೆಚ್ಚು ವಿದೇಶಿ ಪ್ರಯಾಣಿಕರು ಬಂದಿಳಿದಿರುವುದು ಇದೇ ಮೊದಲು.

ಎನ್‌ಎಂಪಿಎ ಡೆಪ್ಯುಟಿ ಚೇರ್ಮನ್ ಎಸ್.ಶಾಂತಿ ಅವರು ಶಿಪ್ ಮಾಸ್ಟರ್ ಅವರನ್ನು ಸ್ಮರಣಿಕೆ ನೀಡಿ ಸ್ವಾಗತಿಸಿದರು. ಎಂಆರ್‌ಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಶ್ಯಾಂಪ್ರಸಾದ್ ಕಾಮತ್ ಅವರು ಶಿಪ್‌ನ ಜನರಲ್ ಮ್ಯಾನೇಜರ್ ಅವರನ್ನು ಸ್ಮರಣಿಕೆ ನೀಡಿ ಸ್ವಾಗತಿಸಿದರು. ಯಕ್ಷಗಾನ, ಭರತನಾಟ್ಯ ಪ್ರದರ್ಶನ ಸಹಿತ ಕರಾವಳಿಯ ಸಂಪ್ರದಾಯ ಪ್ರಕಾರ ಸ್ವಾಗತ ಕೋರಲಾಯಿತು.

ಬಳಿಕ ಪ್ರವಾಸಿಗರು ಕಾರ್ಕಳ ಗೋಮಟೇಶ್ವರ, ಮೂಡುಬಿದಿರೆಯ ಸಾವಿರ ಕಂಬದ ಬಸದಿ , ಸೋನ್ಸ್ ಫಾರ್ಮ್, ಕದ್ರಿ ಮಂಜುನಾಥ ದೇವಾಲಯ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಮಾರುಕಟ್ಟೆ ಮುಂತಾದ ಪ್ರದೇಶಗಳನ್ನು ಸಂದರ್ಶಿಸಿದರು. ಎಂ.ಎಸ್.ನಾರ್ವೆಜಿನ್ ಸ್ಕೈ ಪ್ರವಾಸಿ ಹಡಗು ಮಂಗಳೂರಿನಿಂದ ಗೋವಾ, ಮುಂಬೈ ಬಂದರು ಮೂಲಕ ಅಬುಧಾಬಿಗೆ ಪ್ರಯಾಣ ಬೆಳೆಸಿತು.