ಕೂಡ್ಲಿಗಿ ಹಿರೇಮಠ ಸಂಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ಆಯೋಜಿಸಿದ್ದ ದೇವಿ ಪುರಾಣ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉಜ್ಜಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು, ಹರಪನಹಳ್ಳಿ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ, ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ ಇತರರಿದ್ದರು. 
ಜಿಲ್ಲೆ

ವಿಲಾಸಿ ಜೀವನಕ್ಕೆ ಮೊರೆ ಹೋಗದಿರಿ

ರುದ್ರಪ್ಪ ವಾಲಿ

ಕೂಡ್ಲಿಗಿ: ನಮ್ಮ ನೆಲದ ಹಬ್ಬಗಳು ಭಾರತೀಯ ಸಂಸ್ಕೃತಿಯ ಗರಿಮೆಯನ್ನು ವಿಶ್ವಕ್ಕೆ ಪರಿಚಯಿಸುತ್ತಿವೆ ಎಂದು ಉಜ್ಜಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ಆಯೋಜಿಸಿದ್ದ ದೇವಿ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೂರ್ವಿಕರು ಆಚರಣೆ ಮಾಡಿಕೊಂಡು ಬಂದ ಪ್ರತಿ ಹಬ್ಬಗಳಿಗೂ ಒಂದು ಮಹತ್ವವಿದೆ. ನವರಾತ್ರಿ ಶಕ್ತಿ ಪೀಠದ ಸಂಕೇತ. ಭಾರತದ ಸಂಸ್ಕೃತಿಯಲ್ಲಿ ದೇವಿ ಉಪಾಸನೆಯನ್ನು ಇವತ್ತಿಗೂ ಉಳಿಸಿಕೊಳ್ಳಲಾಗಿದೆ.

ನಮ್ಮ ಅಗತ್ಯಗಳಿಗೆ ಅನುಗುಣವಾಗಿ ನಮ್ಮದೇ ದೇವತಾ ಸ್ವರೂಪಗಳನ್ನು ಸೃಷ್ಟಿಸುವಂತಹ ಸ್ವಾತಂತ್ರ್ಯವನ್ನು ನಮಗೆ ನೀಡಿದೆ. ನವರಾತ್ರಿ ನೆಪದಲ್ಲಿ ಮನುಷ್ಯನಲ್ಲಿನ ಅಹಂಕಾರ, ಆಸೆ, ಲಾಲಸೆ ಅರಿಷಡ್ವರ್ಗಗಳನ್ನು ನಿಗ್ರಹಿಸಿ ಗೆಲ್ಲಬೇಕು ಎನ್ನುವುದು ಸಾರವಾಗಿದೆ. ಆದ್ದರಿಂದ ಪುರಾಣ ಪ್ರವಚನ ಆಲಿಸುವ ಮೂಲಕ ಸನ್ಮಾರ್ಗಿಗಳಾಗಿ ಬಾಳಬೇಕು. ಪ್ರಸ್ತುತ ಜಗತ್ತು ಅಂಧಕಾರದಲ್ಲಿ ಮುಳುಗಿದೆ. ವಿಲಾಸಿ ಜೀವನಕ್ಕೆ ಮೊರೆ ಹೋಗಿ ಈ ನೆಲದ ಸಂಸ್ಕೃತಿ ಹಾಳು ಮಾಡುತ್ತಿವೆ. ಆದ್ದರಿಂದ ಸನಾತನ ಧರ್ಮದ ತಳಹದಿಯಲ್ಲಿ ಪೂಜೆ, ಪುರಾಣ, ಪ್ರವಚನಗಳಿಗೆ ಆದ್ಯತೆ ನೀಡಿ ಈ ನೆಲದ ಮಣ್ಣನ್ನು ಗೌರವಿಸುವ ಜತೆ ನಮ್ಮ ಸಂಸ್ಕೃತಿ ಮೆರೆಸಬೇಕಿದೆ ಎಂದರು.

ವೇ.ಮೂ.ರವೀಂದ್ರನಾಥ ಅವರಿಂದ ಪುರಾಣ ಪ್ರವಚನ ನಡೆಯಿತು. ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಸಿದ್ಧಾರಾಧ್ಯ, ನಿಕಟ ಪೂರ್ವ ಅಧ್ಯಕ್ಷ ಕೆ.ಎಸ್.ವೀರೇಶ, ಪ್ರಮುಖರಾದ ಗಂಗಾಧರ, ಪಿ.ರಜನಿಕಾಂತ, ಉಪನ್ಯಾಸಕ ಸುರೇಶ ಇತರರಿದ್ದರು.