ಹೊಸದುರ್ಗ: ಆಟೋ ಒಂದರಲ್ಲಿ ತಡರಾತ್ರಿ ಪ್ರಯಾಣಿಕರು ಮರೆತು ಹೋಗಿದ್ದ ಬಂಗಾರದ ಒಡವೆಗಳಿದ್ದ ಬ್ಯಾಗ್ ಅನ್ನು ಚಾಲಕ ಪ್ರಾಮಾಣಿಕತೆಯಿಂದ ಪೊಲೀಸ್ ಠಾಣೆಗೆ ಹಿಂತಿರುಗಿಸಿರುವ ಘಟನೆ ಶುಕ್ರವಾರ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಗೃಹಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಾಲೂಕಿನ ಕೊಂಡಜ್ಜಿ ಗ್ರಾಮದಿಂದ ಗುರುವಾರ ರಾತ್ರಿ ಪಟ್ಟಣಕ್ಕೆ ಬಂದಿದ್ದ ದಂಪತಿಗಳು ಬಸ್ ನಿಲ್ದಾಣದಿಂದ ಪಟ್ಟಣದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಆಟೋದಲ್ಲಿ ತೆರಳಿದ್ದರು. ಒಡವೆಗಳಿದ್ದ ಬ್ಯಾಗ್ ಅನ್ನು ಮರೆತು ಆಟೋದಲ್ಲಿಯೇ ಬಿಟ್ಟು ಹೋಗಿದ್ದರು.
ಶಿವನೇ ಕಟ್ಟೆ ಗ್ರಾಮದ ಆಟೋ ಚಾಲಕ ಮಂಜುನಾಥ್ ಕೆಲಸ ಮುಗಿಸಿ ಮನೆಗೆ ತೆರಳಿದಾಗ ಆಟೋದಲ್ಲಿ ಬ್ಯಾಗ್ ಪತ್ತೆಯಾಗಿದೆ.
ಪ್ರಯಾಣಿಕರು ಬಿಟ್ಟು ಹೋಗಿರುವ ಬ್ಯಾಗ್ ಅನ್ನು ವಾರಸುದಾರರಿಗೆ ತಲುಪಿಸಲು ನಿರ್ಧರಿಸಿ ಶುಕ್ರವಾರ ಬೆಳಗ್ಗೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಬ್ಯಾಗ್ ಕಳೆದುಕೊಂಡು ಆತಂಕಕ್ಕೆ ಒಳಗಾಗಿದ್ದ ವಾರಸುದಾರರಿಗೆ ತಲುಪಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆಟ್ಟ ಯೋಚನೆ ಮಾಡದೆ ಪ್ರಾಮಾಣಿಕವಾಗಿ ಬ್ಯಾಗ್ ಅನ್ನು ಹಿಂದಿರುಗಿಸಿದ ಆಟೋ ಚಾಲಕ ಮಂಜುನಾಥ್‌ನ ಪ್ರಾಮಾಣಿಕತೆಯನ್ನು ಮೆಚ್ಚಿದ ಪೊಲೀಸ್ ನಿರೀಕ್ಷಕ ತಿಮಣ್ಣ, ಪಿಎಸ್‌ಐ ಮಹೇಶ್‌ಕುಮಾರ್ ಠಾಣೆಗೆ ಕರೆಸಿ ಅಭಿನಂದನೆ ಸಲ್ಲಿಸಿದ್ದಾರೆ.