ಕೇಶವಮೂರ್ತಿ ವಿ.ಬಿ. ಹಾವೇರಿ
ಏಲಕ್ಕಿ ನಗರ ಖ್ಯಾತಿಯ ಹಾವೇರಿಯಲ್ಲಿ 2023ರ ಜನವರಿ 6ರಿಂದ 8ರವರೆಗೆ ಏರ್ಪಾಟಾಗಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಹೆಚ್ಚು ಕನ್ನಡಾಭಿಮಾನಿಗಳನ್ನು ಸೆಳೆದು ದಾಖಲೆ ಬರೆದಿತ್ತು. ಇದಕ್ಕೆ ಪ್ರಮುಖ ಕಾರಣೀಕರ್ತರಾಗಿದ್ದ ಕಲಾವಿದರಿಗೆ ರಾಜ್ಯ ಸರ್ಕಾರ ಈವರೆಗೆ 30 ಲಕ್ಷ ರೂ. ಬಾಕಿ ಸಂಭಾವನೆ ನೀಡದೇ ಮತ್ತೊಂದು ರೀತಿಯ ದಾಖಲೆ ಮಾಡಲು ಹೊರಟಿರುವುದು ಬೆಳಕಿಗೆ ಬಂದಿದೆ.
ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುವ ಕಲಾಕೃತಿಗಳನ್ನು ಕಲಾವಿದರು ಸ್ವಂತ ಖರ್ಚಿನಲ್ಲಿ ನಿರ್ವಿುಸಿ ಗಮನ ಸೆಳೆದಿದ್ದರು. ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡ ಜ್ಯೋತಿ ರಥ ಸಂಚಾರ ನಡೆದಿತ್ತು. ಆ ರಥ ಹಾಗೂ ಸಮ್ಮೇಳನಾಧ್ಯಕ್ಷರ ಸಾರೋಟಿಗಾಗಿ ಕಲಾವಿದ ಷಹಾಜಹಾನ್ ಮುದಕವಿ ಹಾಗೂ ತಂಡದವರು 30 ಲಕ್ಷ ರೂ. ಖರ್ಚು ಮಾಡಿದ್ದರು.
70ಕ್ಕೂ ಹೆಚ್ಚು ಕಲಾವಿದರು ಸೇರಿ ಸುಂದರ ವೇದಿಕೆ, ಮುಖ್ಯ ದ್ವಾರ, ಶೋಭಾಯಾತ್ರೆಯ ಸಾರೋಟುಗಳು, ಕನ್ನಡ ರಥ ನಿರ್ವಿುಸಿದ್ದರು. ಇದರಿಂದ ಸಮ್ಮೇಳನದ ಕಳೆ ಹೆಚ್ಚಾಗಿತ್ತು. ಇಂತಹ ಕಲಾ ಸೇವಕರಿಗೆ ಬರಬೇಕಿದ್ದ ಗೌರವಧನವನ್ನು ಸರ್ಕಾರ 20 ತಿಂಗಳಾದರೂ ಬಿಡುಗಡೆ ಮಾಡಿಲ್ಲ ಎಂಬುದು ಕಲಾರಸಿಕರ ಬೇಸರಕ್ಕೆ ಕಾರಣವಾಗಿದೆ.
ಸ್ವಂತ ಹಣ ಖರ್ಚು ಮಾಡಿದ ಕಲಾವಿದರು ಈಗ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಅವರ ನೆರವಗೆ ಕನ್ನಡ ಸಾಹಿತ್ಯ ಪರಿಷತ್ ಹಾಗೂ ರಾಜ್ಯ ಸರ್ಕಾರ ಧಾವಿಸಬೇಕಿದೆ.
ಮಂಡ್ಯದಲ್ಲಿ ಡಿಸೆಂಬರ್ 20ರಿಂದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಿದ್ದಾಪುರದ ಭುವನೇಶ್ವರಿ ದೇಗುಲದಿಂದ ಈಗಾಗಲೇ ಕನ್ನಡ ಜ್ಯೋತಿ ರಥಯಾತ್ರೆ ಆರಂಭವಾಗಿದ್ದು, ಜಿಲ್ಲೆಗೆ ಆಗಮಿಸಿದೆ. ಸಂಭಾವನೆ ಕೈಸೇರದೇ ಬೇಸರಗೊಂಡಿರುವ ಕಲಾವಿದರ ತಂಡ ಯಾತ್ರೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ.
ನಮ್ಮ ಜಿಲ್ಲೆಯ ಸಮ್ಮೇಳನ ಯಶಸ್ವಿಯಾಗಲೆಂದು ಬಡ ಕಲಾವಿದರೆಲ್ಲ ಸೇರಿ ಸ್ವಂತ ಹಣ ಖರ್ಚು ಮಾಡಿ ವೇದಿಕೆ, ಕನ್ನಡ ರಥ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಾರೋಟು ಮಾಡಿದ್ದೆವು. ಕಸಾಪ ಅಧ್ಯಕ್ಷರು, ಜಿಲ್ಲಾಧಿಕಾರಿಯವರು ಈ ಬಗ್ಗೆ ಪರಿಶೀಲಿಸಿ, ಕಲಾವಿದರ ನೋವಿಗೆ ಸ್ಪಂದಿಸಬೇಕು. | ಷಹಾಜಹಾನ್ ಮುದಕವಿ, ಕಲಾವಿದ
ಹಾವೇರಿ ಸಮ್ಮೇಳನದ ಖರ್ಚು ವೆಚ್ಚಕ್ಕಾಗಿ ಸರ್ಕಾರ ನೇರವಾಗಿ ಜಿಲ್ಲಾಡಳಿತಕ್ಕೆ ಹಣ ಬಿಡುಗಡೆ ಮಾಡಿತ್ತು. ಈ ವಿಷಯ ನನ್ನ ಗಮನಕ್ಕೆ ಬಂತು. ಆಗ ನಾನು ಡಿಸಿ ಅವರನ್ನು ವಿಚಾರಿಸಿದೆ, ಅವರು ಈಗಾಗಲೇ ಎಂಸಿಎಗೆ ಹಣ ಬಿಡುಗಡೆ ಮಾಡಿದ್ದೇವೆ ಎಂದರು. ಎಂಸಿಎ ಗುತ್ತಿಗೆದಾರರಿಗೆ ಕೊಟ್ಟಿದೆ. ಗುತ್ತಿಗೆದಾರರು ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಎಂಸಿಎ ಹೇಳಿಕೊಂಡಿದೆ. ಈ ಕುರಿತು ಎಂಸಿಎ ಹಾಗೂ ಹಾವೇರಿ ಡಿಸಿ ಅವರಿಗೆ ಪತ್ರ ಬರೆಯುತ್ತೇನೆ. | ಡಾ. ಮಹೇಶ ಜೋಶಿ, ಅಧ್ಯಕ್ಷ ಕಸಾಪ