ಎಚ್.ಡಿ.ಕೋಟೆ: ತಾಲೂಕಿನ ಜಿ.ಬಿ.ಸರಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಈರೇಗೌಡ ಅವಿರೋಧವಾಗಿ ಆಯ್ಕೆಯಾದರು.
ಶಿವರಾಜು ಅವರು ಪಕ್ಷದ ಒಡಂಬಡಿಕೆಯಂತೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಗ್ರಾಪಂ ಕಚೇರಿ ಆವರಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಈರೇಗೌಡ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ವಸಂತ್‌ಕುಮಾರ್ ಅವಿರೋಧ ಆಯ್ಕೆ ಘೋಷಿಸಿದರು.
ಜಿ.ಬಿ.ಸರಗೂರು ಗ್ರಾಮ ಪಂಚಾಯಿತಿಯಲ್ಲಿ 17 ಸದಸ್ಯರಿದ್ದು, ಕಾಂಗ್ರೆಸ್ ಬೆಂಬಲಿತ 7 ಸದಸ್ಯರು ಚುನಾವಣೆಯಿಂದ ದೂರ ಉಳಿದಿದ್ದರಿಂದ 10 ಸದಸ್ಯ ಬಲದ ಈರೇಗೌಡ ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ ಈರೇಗೌಡ ಮಾತನಾಡಿ, ಎಲ್ಲ ಸದಸ್ಯರು, ಮುಖಂಡರು ಮತ್ತು ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಈರೇಗೌಡ ಅವರ ಅವಿರೋಧ ಆಯ್ಕೆಯನ್ನು ಘೋಷಿಸುತ್ತಿದ್ದಂತೆ ಬೆಂಬಲಿಗರು, ಹಿತೈಷಿಗಳು, ಸದಸ್ಯರು ಜಯಘೋಷ ಕೂಗಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಗ್ರಾಪಂ ಉಪಾಧ್ಯಕ್ಷೆ ವೆಂಕಟಮ್ಮ, ಸದಸ್ಯರಾದ ಶಿವರಾಜು, ರಾಜು, ವಿಜಯಾ ರಮೇಶ್, ಸುಧಾ ಬಸವರಾಜು, ತಿಮ್ಮಾಚಾರ್, ಗೌರಮ್ಮ, ಈರಾಜು, ಕುಮಾರ್ ಮತ್ತು ವಿದ್ಯಾಸಾಗರ್, ತಾಪಂ ಉಪಾಧ್ಯಕ್ಷ ಕೃಷ್ಣೇಗೌಡ, ಬಿಜೆಪಿ ಮುಖಂಡ ಕೆ.ಎಂ.ಅನುರಾಜು, ಜಯರಾಮ್, ಮರಿಸಿದ್ದೇಗೌಡ, ಕುಮಾರ್ ಇತರರಿದ್ದರು.