ಜಿಲ್ಲೆ

16.80 ಲಕ್ಷ ರೂ. ಮೌಲ್ಯದ ಎಲ್‌ಎಸ್‌ಡಿ, ಡ್ರಗ್ಸ್ ಪತ್ತೆ, ಕೇರಳದ ಯುವಕನ ಬಂಧನ

Dakshina Kannada

ಮಂಗಳೂರು: ನಗರದಲ್ಲಿ ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕ ವಸ್ತು ಎಲ್‌ಎಸ್‌ಡಿ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಆರೋಪಿಯನ್ನು ಬಂಧಿಸಲಾಗಿದೆ.

ಕ್ಯಾಲಿಕಟ್ ಮುಟ್ಟಂಗಲ್ ನಿವಾಸಿ, ಪ್ರಸ್ತುತ ಕದ್ರಿಯ ಪಿಜಿಯಲ್ಲಿ ವಾಸಿಸುತ್ತಿರುವ ಮೊಹಮ್ಮದ್ ಅಜಿನಾಸ್(25) ಎಂಬಾತ ಡ್ರಗ್ಸ್ ಮಾರುತ್ತಿದ್ದ ಬಗ್ಗೆ ನಗರ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಎಲ್‌ಎಸ್‌ಡಿ ಒಂದು ಸ್ಟ್ಯಾಂಪ್‌ಗೆ 2 ಸಾವಿರದಿಂದ 6 ಸಾವಿರ ರೂ. ಬೆಲೆಯಿದೆ. ಈತನಿಂದ 16.80 ಲಕ್ಷ ರೂ. ಮೌಲ್ಯದ ಒಟ್ಟು 15.15 ಗ್ರಾಂ ತೂಕವಿರುವ 840 ಎಲ್‌ಎಸ್‌ಡಿ ಸ್ಟ್ಯಾಂಪ್, ಮೋಟಾರ್ ಬೈಕ್, 2 ಮೊಬೈಲ್ ಸೇರಿದಂತೆ 17,15,500 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತನಿಖಾ ತಂಡಕ್ಕೆ ಪುರಸ್ಕಾರ: ಡಿಸಿಪಿ ಹರಿರಾಂ ಶಂಕರ್ ನೇತೃತ್ವದ ತಂಡ ಹಲವು ದಿನಗಳಿಂದ ಮಾದಕ ದ್ರವ್ಯ ಸಾಗಾಟ ವಿರುದ್ಧ ತನಿಖೆ ನಡೆಸುತ್ತಿದ್ದು, ಇದರ ಮುಂದುವರಿದ ಭಾಗವಾಗಿ ಈ ಪ್ರಕರಣವನ್ನು ಭೇದಿಸಿದೆ. ತಂಡಕ್ಕೆ ಅಭಿನಂದನೆ ಜತೆಗೆ 10 ಸಾವಿರ ರೂ. ಪುರಸ್ಕಾರ ನೀಡುವುದಾಗಿ ಕಮಿಷನರ್ ಪ್ರಕಟಿಸಿದರು.

ಡಿಸಿಪಿ ಹರಿರಾಂ ಶಂಕರ್, ಸಹಾಯಕ ಪೊಲೀಸ್ ಆಯುಕ್ತರಾದ ಪರಮೇಶ್ವರ ಹೆಗ್ಡೆ, ರಂಜಿತ್ ಕುಮಾರ್, ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಉಪಸ್ಥಿತರಿದ್ದರು.

ಯಾರ‌್ಯಾರು ಶಾಮೀಲು ತನಿಖೆ: ಆರೋಪಿ ಐಷಾರಾಮಿ ವ್ಯಕ್ತಿಗಳಿಗೆ ಡ್ರಗ್ಸ್ ಮಾರುತ್ತಿದ್ದ. ಮಂಗಳೂರು ನಗರ ಮಾತ್ರವಲ್ಲ, ಕಾಸರಗೋಡು, ಗೋವಾದಲ್ಲೂ ಈತನ ಜಾಲವಿರುವ ಮಾಹಿತಿ ಲಭಿಸಿದೆ. ಈತನ ಹಿನ್ನೆಲೆ ಹಾಗೂ ಯಾರ‌್ಯಾರು ಶಾಮೀಲಾಗಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಆಯುಕ್ತರು ತಿಳಿಸಿದರು.