ಬೆಂಗಳೂರು: ಬಂಜರು ಜಮೀನನ್ನು ಕೃಷಿಯೋಗ್ಯ ಜಮೀನನ್ನಾಗಿ ಮಾರ್ಪಡಿಸಲು ಹಾಗೂ ಜಲಾನಯನ ಪ್ರದೇಶ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಭೂ ಸಂಪನ್ಮೂಲ ಸಮೀಕ್ಷೆ (ಎಲ್‌ಆರ್‌ಐ) ತುಂಬ ಉಪಯುಕ್ತವಾಗಲಿದೆ ಎಂದು ಕೇಂದ್ರದ ಭೂ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿ ನಿತಿನ್ ಖಾಡೆ ತಿಳಿಸಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್ ಜಿಕೆವಿಕೆಯಲ್ಲಿ ವಿವಿ ಜಲಾನಯನ ನಿರ್ವಹಣೆಯ ಉತ್ಕೃಷ್ಟತಾ ಕೇಂದ್ರವು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಆಯೋಜಿಸಿದ್ದ ‘ಭೂ ಸಂಪನ್ಮೂಲ ಸಮೀಕ್ಷೆ ಆಧಾರಿತ ಸುಸ್ಥಿರ ಜಲಾನಯನ ನಿರ್ವಹಣೆ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಜಲಾನಯನ ಪ್ರದೇಶದ ಸರ್ವೆ ಸಂಖ್ಯೆವಾರು ನಿರ್ದಿಷ್ಟ ಸಮಸ್ಯೆ ಹಾಗೂ ಅವುಗಳ ಕಾರಣವನ್ನು ಎಲ್‌ಆರ್‌ಐ ಮತ್ತು ಜಲವಿಜ್ಞಾನ ಅಧ್ಯಯನದಿಂದ ತಿಳಿಯಬಹುದಾಗಿದೆ. ಜಲಾನಯನ ಪ್ರದೇಶದಿಂದ ಹೊರಹೋಗುವ ನೀರಿನ ಪ್ರಮಾಣವನ್ನು ನಿಖರವಾಗಿ ಗುರುತಿಸಿ ಅಷ್ಟೂ ಜಲವನ್ನು ಸಂಗ್ರಹಿಸುವ ವಿನ್ಯಾಸಗೊಳಿಸಬಹುದಾಗಿದೆ. ಜತೆಗೆ ಈ ಸಮಿಕ್ಷೆಯ ಮಾಹಿತಿಯಂತೆ ರೈತರ ಜಮೀನಿಗೆ ಸೂಕ್ತ ಬೆಳೆ ಆಯ್ಕೆ ಹಾಗೂ ಪೋಷಕಾಂಶ ನಿರ್ವಹಣೆಗೆ ಪ್ರೇರೇಪಿಸಬಹುದು ಎಂದರು.
ದೇಶದಲ್ಲಿ ವಿಶ್ವಬ್ಯಾಂಕ್ ಸಹಕಾರದಲ್ಲಿ ಜಲಾನಯನ ಅಭಿವೃದ್ಧಿ ಯೋಜನೆಯನ್ನು ಕರ್ನಾಟಕ ಹಾಗೂ ಒಡಿಶಾ ರಾಜ್ಯದಲ್ಲಿ ಮಾತ್ರ ಜಾರಿಗೊಳಿಸಲಾಗುತ್ತಿದೆ. ಈ ಪೈಕಿ ಕರ್ನಾಟಕವು ಉತ್ತಮ ನಿರ್ವಹಣೆ ಮಾಡಿದ್ದು, ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ನಿತಿನ್ ಖಾಡೆ ಶ್ಲಾಘಿಸಿದರು.
ಇಲಾಖಾ ಯೋಜನೆ ರೂಪಿಸಲು ಅನುಕೂಲ:
ವಿಶ್ವಬ್ಯಾಂಕ್ ಕನ್ಸಲ್ಟೆಂಟ್ ಜೆ.ವಿ.ಆರ್.ಮೂರ್ತಿ ಮಾತನಾಡಿ, ರಾಷ್ಟ್ರೀಯ ಭೂ ಸಂಪನ್ಮೂಲ ಸಮೀಕ್ಷೆ ಮತ್ತು ಭೂ ಬಳಕೆ ಸಂಸ್ಥೆಯು ಕರ್ನಾಟಕದ ವಿವಿಧ ಇಲಾಖೆಗಳ ಸಹಯೋಗದಲ್ಲಿ 25 ಜಿಲ್ಲೆಗಳ 35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭೂ ಸಂಪನ್ಮೂಲ ಮತ್ತು ಜಲವಿಜ್ಞಾನ ಅಧ್ಯಯನ ಕೈಗೊಂಡಿದೆ. ಈ ಮಾಹಿತಿಯನ್ನು ಶೇಖರಣೆ ಮಾಡಲಾಗಿದೆ. ಈ ವ್ಯವಸ್ಥೆಯಿಂದ ಜಲಾನಯನ ಪ್ರದೇಶದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಯನ್ನು 6 ತಿಂಗಳಲ್ಲಿ ಪೂರ್ಣಗೊಳಿಸಲು ಸಾಧ್ಯವಿದ್ದು, ಆಯಾ ಇಲಾಖೆಗಳ ಯೋಜನೆಗಳನ್ನು ರೂಪಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
3 ದಿನವೂ ತಾಂತ್ರಿಕ ಗೋಷ್ಠಿ:
ಉದ್ಘಾಟನಾ ಕಾರ್ಯಕ್ರಮದ ಬಳಿಕ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವ ವಿಜ್ಞಾನಿಗಳು ಹಾಗೂ ಹಿರಿಯ ಅಧಿಕಾರಿಗಳು ತಾಂತ್ರಿಕ ಗೋಷ್ಠಿ ನಡೆಯಿತು. ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಅಶೋಕ್ ದಳವಾಯಿ ಅವರು ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಮ್ಮೇಳದ ಉಳಿದೆರಡು ದಿನವೂ ತಲಾ 3 ಗೋಷ್ಠಿಗಳು ಆಯೋಜನೆ ಆಗಿವೆ.
ಕಾರ್ಯಕ್ರಮದಲ್ಲಿ ರಾಜ್ಯ ಜಲಾನಯನ ಅಭಿವೃದ್ಧಿ ಇಲಾಖಾ ಆಯುಕ್ತ ಮಹೇಶ್ ಶಿರೂರ್, ನಿರ್ದೇಶಕ ಎಂ.ಪಿ.ಬಂತನಾಳ, ಉತ್ಕೃಷ್ಟತಾ ಕೇಂದ್ರದ ವಿಶೇಷಾಧಿಕಾರಿ ಡಾ. ಎನ್.ಬಿ.ಪ್ರಕಾಶ್ ಹಾಜರಿದ್ದರು.
ದೇಶದಲ್ಲಿ 1/3 ಭಾಗ ಒಣ ಜಮೀನು ಪ್ರದೇಶವಿದೆ. ಹೆಚ್ಚಿನ ರೈತರು ಕಡಿಮೆ ಹಿಡುವಳಿ ಹೊಂದಿದ್ದು, ನೀರಿನ ಕೊರತೆ ಜತೆಗೆ ಅತಿಯಾದ ರಸಗೊಬ್ಬರ ಬಳಸಲಾಗುತ್ತಿದೆ. ಈ ಸಮಸ್ಯೆ ಪರಿಹರಿಸಲು ಸುಜಲಾ ಯೋಜನೆ ಜಾರಿ ಮಾಡಿ ಯಶಸ್ವಿಯಾಗಲು ವಿಶ್ವಬ್ಯಾಂಕ್ ಸಹಕಾರ ನೀಡಿದೆ. ಕರ್ನಾಟಕದಲ್ಲಿ ಸಲವಾಗಿರುವ ಯೋಜನೆಯ ಮಾದರಿಯನ್ನು ಇತರ ರಾಜ್ಯಗಳಿಗೆ ತಿಳಿಸುವ ಹೊಣೆಯನ್ನು ನಾವು ಹೊರಬೇಕಿದೆ.
- ಡಾ. ಎಸ್.ವಿ.ಸುರೇಶ್, ಬೆಂಗಳೂರು ಕೃಷಿ ವಿವಿ ಕುಲಪತಿ