ಜಿಲ್ಲೆ

ನಿಷ್ಠೆಯಿಂದ ದುಡಿದರೆ ಸಿಗಲಿದೆ ಸ್ಥಾನಮಾನ, ಶಾಸಕ ನಿಸರ್ಗ ನಾರಾಯಣಸ್ವಾಮಿ ಅಭಿಮತ

Bengaluru Rural

ದೇವನಹಳ್ಳಿ: ಪಕ್ಷದಲ್ಲಿ ನಿಷ್ಠೆಯಿಂದ ದುಡಿದರೆ ಅರ್ಹತೆಗೆ ತಕ್ಕಂತೆ ಸ್ಥಾನಮಾನ ಸಿಗಲಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಪಟ್ಟಣದ ಪ್ರಶಾಂತನಗರದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ವೆಂಕಟಗಿರಿಕೊಟೆ ಗ್ರಾಪಂ ಸದಸ್ಯ ಅಮರ್‌ನಾಥ್ ನೂರಾರು ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆಗೊಂಡ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿಯೇ ಶಾಸಕನಾಗಿದ್ದೇನೆ. ಪಕ್ಷ ಯಾವುದೇ ಸಮಾಜ, ಜಾತಿಗೆ ಸೀಮಿತವಲ್ಲ. ಇದು ಕಾರ್ಯಕರ್ತರ ಪಕ್ಷ. ಬೇರೆ ಪಕ್ಷದಲ್ಲಿರುವ ಬಹುತೇಕ ನಾಯಕರು ಜೆಡಿಎಸ್ ಗರಡಿಯಲ್ಲಿ ಬೆಳೆದವರು. ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಕ್ಷೇತ್ರದ 40 ಸಾವಿರ ಕುಟುಂಬಗಳನ್ನು ಜೆಡಿಎಸ್‌ಗೆ ಸೇರಿಸಿಕೊಳ್ಳಬೇಕೆಂಬ ಬಯಕೆ ನನ್ನದು ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ರೈತ ಸುಮ್ಮನಾದರೆ ದುಕೇ ಇಲ್ಲ. ಅದೇ ರೀತಿ ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಜೆಡಿಎಸ್ ಇಲ್ಲದೇ ಪರಿಪೂರ್ಣತೆ ಇಲ್ಲ ಎಂದರು.

ಪಕ್ಷದ ತಾಲೂಕು ಅಧ್ಯಕ್ಷ ಬಿ.ಶ್ರೀನಿವಾಸ್ ಮಾತನಾಡಿ, ಜೆಡಿಎಸ್ ಮುಳುಗುವ ಹಡಗು ಎನ್ನುವುದು ಕನಸು. ಪ್ರತಿವರ್ಷ ಕಾರ್ಯಕರ್ತರು ಹಾಗೂ ಪಕ್ಷಕ್ಕೆ ಸೇರುವವರ ಸಂಖ್ಯೆ ಹೆಚ್ಚಾಗುತ್ತಲೇ ಇರುತ್ತದೆ ಎಂದರು.

ಪಕ್ಷಕ್ಕೆ ಸೇರಿದ ಅಮರನಾಥ್ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತನಾಗಿ, 5 ವರ್ಷ ಗ್ರಾಪಂ ಸದಸ್ಯನಾಗಿ ಅಭಿವೃದ್ಧಿ ಕೆಲಸ ಮಾಡಿದರೂ ಸೂಕ್ತ ಸ್ಥಾನಮಾನ ಸಿಗಲಿಲ್ಲ. ಜೆಡಿಎಸ್ ಪಕ್ಷದ ವರಿಷ್ಠರ ಚಿಂತನೆಗಳು ಆಕರ್ಷಿಸಿದ್ದು, ನಮ್ಮ ಬೆಂಬಲಿಗರ ಪಕ್ಷ ಸೇರ್ಪಡೆಯಾಗಿದ್ದು, ಮುಂದಿನ ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರದ ಗದ್ದುಗೆ ಏರಲು ಈಗಿನಿಂದಲೇ ಪಕ್ಷ ಸಂಘಟನೆ ಮಾಡಲು ಪ್ರಯತ್ನಿಸಲಾಗುವುದು ಎಂದರು.

ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಆರ್.ಮುನೇಗೌಡ, ಪ್ರಧಾನಕಾರ್ಯದರ್ಶಿ ಜಿ.ಎ.ರವೀಂದ್ರ, ವಿಜಯಪುರ ಹೋಬಳಿ ಅಧ್ಯಕ್ಷ ವೀರಪ್ಪ, ಚನ್ನರಾಯಪಟ್ಟಣ ಹೋಬಳಿ ಅಧ್ಯಕ್ಷ ಮುನಿರಾಜು ದೇವನಹಳ್ಳಿ ಟೌನ್ ಘಟದ ಅಧ್ಯಕ್ಷ ಮುನಿನಂಜಪ್ಪ, ತಾಲೂಕು ಯುವ ಘಟಕದ ಅಧ್ಯಕ್ಷ ಆರ್.ಭರತ್, ಎಪಿಎಂಸಿ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಹಾಪ್‌ಕಾಮ್ಸ್ ಉಪಾಧ್ಯಕ್ಷ ಇರಿಗೇನಹಳ್ಳಿ ಶ್ರೀನಿವಾಸ್, ಎಪಿಎಂಸಿ ಅಧ್ಯಕ್ಷ ಕೆ.ವಿ.ಮಂಜುನಾಥ್ ಮುಂತಾದವರಿದ್ದರು.