ಜಿಲ್ಲೆ

ಪೊಲೀಸರ ಕರ್ತವ್ಯ ನಿಷ್ಠೆ, ಸೇವೆ ಸದಾ ಸ್ಮರಣೀಯ

ಮಡಿಕೇರಿ: ದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಆಸ್ತಿ ರಕ್ಷಣೆ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸರಿಗೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಳೆದ ವರ್ಷ ಕರ್ತವ್ಯ ನಿರ್ವಹಿಸುವಾಗ ದೇಶದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಸರನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಓದಿದರು.


ಕೆ.ರಾಮರಾಜನ್ ಮಾತನಾಡಿ, ನಾಗರಿಕರ ಸಮಗ್ರ ಸುರಕ್ಷತೆ ಹಾಗೂ ಭದ್ರತೆಗಾಗಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ಪೊಲೀಸರ ಕರ್ತವ್ಯ ನಿಷ್ಠೆ ಹಾಗೂ ನಿಸ್ವಾರ್ಥ ಸೇವೆಯನ್ನು ಸದಾ ಸ್ಮರಿಸುವಂತಾಗಬೇಕು. 1959 ರ ಅ.21ರಂದು ಭಾರತದ ಗಡಿ ಪ್ರದೇಶದಲ್ಲಿರುವ ಲಡಾಕ್ ಹಾಟ್ ಸ್ಪ್ರಿಂಗ್ಸ್ ಅಕ್ಷಯ್ ಚಿನ್ ಎಂಬ ಸ್ಥಳದಲ್ಲಿ ಸಿಆರ್‌ಪಿಎಫ್ ಪಡೆಯ ಕರಣ್ ಸಿಂಗ್, ಎಸ್‌ಐ ಮತ್ತು ಸಿಬ್ಬಂದಿ ಗಡಿ ಭದ್ರತಾ ಕರ್ತವ್ಯದಲ್ಲಿರುವಾಗ ಚೀನಾ ಪಡೆ ದಾಳಿ ನಡೆಸಿತು. ನಮ್ಮ ಭಾರತೀಯ ವೀರ ಪೊಲೀಸರು ಎದೆಗುಂದದೆ ಜೀವದ ಹಂಗು ತೊರೆದು ಧೈರ್ಯ ಮತ್ತು ಸಾಹಸದಿಂದ ಹೋರಾಟ ನಡೆಸಿದರು. ಈ ಸಂದರ್ಭದಲ್ಲಿ 10 ಜನ ಪೊಲೀಸರು ವೀರ ಮರಣ ಹೊಂದಿದರು. 9 ಜನ ಪೊಲೀಸರು ಗಾಯಗೊಂಡು ಸೆರೆಯಾದರು. ವೀರ ಮರಣ ಹೊಂದಿದ ಪೊಲೀಸರ ಸಾವಿಗೆ ಇಡೀ ಭಾರತ ದೇಶದ ಜನತೆಯೇ ಶೋಕಿಸಿತು ಮತ್ತು ಹುತಾತ್ಮರಾದ ಪೊಲೀಸರ ನೆನಪಿಗಾಗಿ ಘಟನೆ ನಡೆದ ಸ್ಥಳದಲ್ಲಿ ಸಮುದ್ರ ಮಟ್ಟದಿಂದ ಸುಮಾರು 16 ಸಾವಿರ ಅಡಿ ಎತ್ತರದ ಒಂದು ಸ್ಮಾರಕವನ್ನು ಭಾರತ ಸರ್ಕಾರ ನಿರ್ಮಿಸಿದೆ ಎಂದರು.


ಕಳೆದ ವರ್ಷ ದೇಶದಾದ್ಯಂತ ಒಟ್ಟು 189 ಪೊಲೀಸರು ಸೇವೆಯಲ್ಲಿದ್ದಾಗ ಹುತಾತ್ಮರಾಗಿದ್ದಾರೆ. ಅವರಲ್ಲಿ ಕರ್ನಾಟಕದಿಂದ ರವಿ ಸಿ.ಉಕ್ಕುಂದ್, ಶಬೀರ್ ಹುಸೈನ್, ಸುಭಾಸ್ ಮಡಿವಾಳ್, ಕೆ.ಜೈ ಶ್ರೀನಿವಾಸ್, ಎಂ.ನಾಗರಾಜು , ವೆಂಕಟೇಶ್, ಮಯೂರ್ ಚವಾಣ್, ಕಾರೆಪ್ಪ, ಎನ್.ಸಿದ್ದೇಶ್ವರ, ಶಿಕಂದರ್ ನಾಟಿಕಾರ್, ಎನ್.ಸುರೇಶ್, ರಮೇಶ್ ಮಲ್ಲಪ್ಪ, ಶರಣಬಸಪ್ಪ, ಮಹೇಶ್, ನಿಂಗಪ್ಪ, ಬಿ.ಎನ್.ಗುದ್ದದ್ ಹುತಾತ್ಮರಾಗಿದ್ದಾರೆ ಎಂದರು.


ಜಿಪಂ ಸಿಇಒ ವರ್ಣಿತ್ ನೇಗಿ ಮಾತನಾಡಿ, ರಾಷ್ಟ್ರದ ಗಡಿ ಪ್ರದೇಶದಲ್ಲಿ ಹೇಗೆ ಸೈನಿಕರು ಕರ್ತವ್ಯ ನಿರ್ವಹಿಸುತ್ತಾರೋ ಅದೇ ರೀತಿ ರಾಷ್ಟ್ರದ ಆಂತರಿಕ ವ್ಯವಸ್ಥೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ತರವಾಗಿದೆ. ಸದಾ ಎಚ್ಚರವಹಿಸಿ ಸಾರ್ವಜನಿಕರ ರಕ್ಷಣೆ ಮತ್ತು ಸುರಕ್ಷತೆಗೆ ಗಮನಹರಿಸುತ್ತಾರೆ ಎಂದರು.


ಜಿಲ್ಲಾ ಸಶಸ್ತ್ರ ಪಡೆಯ ಚೆನ್ನನಾಯಕ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯಿಂದ ಮೂರು ಸುತ್ತು ಕುಶಾಲುತೋಪು ಹಾರಿಸಿ ಗೌರವ ಅರ್ಪಿಸಲಾಯಿತು. ಸಿದ್ದೇಶ್ ನೇತೃತ್ವದ ಪೊಲೀಸ್ ವಾದ್ಯ ತಂಡದವರು ರಾಷ್ಟ್ರಗೀತೆ ಹಾಡಿದರು.


ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಸುಂದರರಾಜ್, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಡಿವೈಎಸ್‌ಪಿ ಜಗದೀಶ್, ಪ್ರಮುಖರಾದ ಪಿ.ಎ.ನಂಜಪ್ಪ, ಐ.ಪಿ. ಮೇದಪ್ಪ, ಅನೂಪ್ ಮಾದಪ್ಪ, ಅನಂತ ಎಚ್.ಎಸ್., ಚೆನ್ನನಾಯಕ, ಮಂಜು ಎಚ್.ಡಿ., ವಾಣಿಶ್ರೀ, ಸವಿತಾ, ಲಿಂಗಪ್ಪ, ಶ್ರೀಧರನ್ ನಾಯರ್, ಮುತ್ತಪ್ಪ, ಅಂಬೆಕಲ್ಲು ನವೀನ್, ಸೂರ್ತಲೆ ಸೋಮಣ್ಣ, ಗೀತಾ ಗಿರೀಶ್, ನಿರಂಜನ, ಮಧುಕರ, ಆಂಥೋಣಿ ಡಿಸೋಜ, ಪೂಣಚ್ಚ, ಬಿ.ಬಿ.ಜಗದೀಶ್, ವೆಂಕಪ್ಪ, ಸಿದ್ದೇಶ್ ಸೇರಿದಂತೆ ಹಲವರು ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ, ಗೌರವ ನಮನ ಸಲ್ಲಿಸಿದರು.