ಶಿರಸಿ: ಸಹಕಾರಿ ಸಂಘಗಳಿಗೆ ನಿಷ್ಟಾವಂತ ಸದಸ್ಯರು, ನೌಕರರೇ ಜೀವಾಳ. ಜಿಲ್ಲೆಯಲ್ಲಿ ಹಿರಿಯರ ಪರಿಶ್ರಮದಿಂದ ಸಹಕಾರಿ ಸಂಸ್ಥೆಗಳು ಆರಂಭಗೊಂಡು ಜಿಲ್ಲೆಯ ಜನ, ಜೀವನದೊಂದಿಗೆ ಪ್ರಮುಖ ಪಾತ್ರವಹಿಸಿವೆ ಎಂದು ನಗರಸಭೆ ಅಧ್ಯಕ್ಷೆ ಶರ್ವಿುಳಾ ಮಾದನಗೇರಿ ಹೇಳಿದರು.
ನಗರದ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಪ್ರಧಾನ ಕಚೇರಿ ಆವರಣದಲ್ಲಿ 52 ಹಿರಿಯ ಸದಸ್ಯರನ್ನು ಶನಿವಾರ ಸನ್ಮಾನಿಸಿ ಅವರು ಮಾತನಾಡಿದರು.
ಸಂಸ್ಥೆ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ನಾಲ್ಕೈದು ದಶಕಗಳಿಂದ ಸಂಘದೊಂದಿಗೆ ವ್ಯವಹರಿಸಿ ಅವಿನಾಭಾವ ಸಂಬಂಧ ಹೊಂದಿ ಸಂಘದ ಆಧಾರಸ್ಥಂಬದಂತೆ ನಿಂತು ಅಭಿವೃದ್ಧಿಗೆ ಕಾರಣೀಕರ್ತರಾದ ಸದಸ್ಯರು, ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ಸಂಘದ ಧ್ಯೇಯೋದ್ದೇಶಗಳ ಸಫಲತೆಗೆ ಶ್ರಮಿಸಿದ ಸಿಬ್ಬಂದಿಗಳು, ಅಡಕೆ ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ವರ್ತಕರು ಹಾಗೂ ಕಾರ್ವಿುಕರನ್ನು ಸನ್ಮಾನಿಸುತ್ತಿರುವುದು ಸಂತಸ ತಂದಿದೆ ಎಂದರು.
ಐವರು ನಿವೃತ್ತ ಸಿಬ್ಬಂದಿ, ಇಬ್ಬರು ಹಿರಿಯ ಕಾರ್ವಿುಕರು ಹಾಗೂ ಓರ್ವ ಅಡಕೆ ವ್ಯಾಪಾರಸ್ಥರನ್ನು ಸನ್ಮಾನಿಸಲಾಯಿತು. ಸಂಘದೊಂದಿಗೆ ಉತ್ತಮ ವ್ಯಾವಹಾರಿಕ ಸಂಬಂಧ ಹೊಂದಿರುವ ಶಿರಸಿ ತಾಲೂಕಿನ 40 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಉತ್ತಮ ಸಹಕಾರ ಸಂಘ ಪ್ರಶಸ್ತಿ ಮತ್ತು ಪ್ರೋತ್ಸಾಹಧನ ಸರ್ಟಿಫಿಕೆಟ್ ನೀಡಿ ಗೌರವಿಸಲಾಯಿತು. ಸನ್ಮಾನಿತ ಸದಸ್ಯರ ಪರವಾಗಿ ನಾರಾಯಣ ಭಟ್ಟ ಹಂದೀಮನೆ ಮತ್ತು ಎಸ್.ಜಿ. ಹೆಗಡೆ ಊರತೋಟ ಮಾತನಾಡಿದರು. ನಿರ್ದೇಶಕ ರವೀಂದ್ರ ಹೆಗಡೆ ಹೀರೇಕೈ, ಪ್ರಧಾನ ವ್ಯವಸ್ಥಾಪಕ ಗಿರೀಶ ಹೆಗಡೆ, ಟಿಎಸ್ಎಸ್ ನಿರ್ದೇಶಕರು ಇದ್ದರು.