ಕವಿತಾಳ: ಅಮೀನಗಡ ಗ್ರಾಪಂನಲ್ಲಿ ಉದ್ಯೋಗ ಖಾತ್ರಿ ಯೋಜನೆ ಮಸ್ಕಿ ತಾಲೂಕು ಸಹಾಯಕ ನಿರ್ದೇಶಕ ಶಿವಾನಂದರಡ್ಡಿ ಮತ್ತು ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೃಷ್ಣರನ್ನು ಕಚೇರಿ ಆವರಣದೊಳಗೆ ಕೂಡಿ ಹಾಕಿ ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ 500 ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡಿದ್ದು, ಕಡಿಮೆ ಮೊತ್ತದ ಕೂಲಿ ಪಾವತಿಸಲಾಗಿದೆ ಎಂದು ದೂರಿ ಸಹಾಯಕ ನಿರ್ದೇಶಕ ಹಾಗೂ ಪಿಡಿಒಗೆ ಮನವಿ ಸಲ್ಲಿಸಿದ್ದರು. ಕೆಲಸ ಮಾಡಿದಷ್ಟು ಹಣ ಹಾಕಲಾಗಿದೆ. ಹೆಚ್ಚಿನ ಹಣ ಹಾಕಲು ತಾಂತ್ರಿಕ ತೊಂದರೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಕಚೇರಿ ಆವರಣದಲ್ಲಿ ಕೂಡಿ ಹಾಕಿದ ಕೂಲಿಕಾರರು, ನಾವು ದುಡಿದ ಹಣ ಕೇಳಿದರೆ ಹಾಕುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಮತು ಕೂಲಿಕರರ ನಡುವೆ ವಾಗ್ವಾದ ನಡೆಯಿತು. ಬಳಿಕ ಕೂಲಿ ಕಾರ್ಮಿಕರು ಅಧಿಕಾರಿಗಳನ್ನು ಕಚೇರಿಯೊಳಗೆ ಕೂಡಿ ಹಾಕಿ ಕೀಲಿ ಹಾಕಿದರು. ಪೊಲೀಸರು ಬಂದು ಕಚೇರಿ ಆವರಣದ ಬೀಗ ತೆಗೆದರು. ಕೂಲಿಕಾರರಾದ ಮಲ್ಲಮ್ಮ ತಳವಾರ, ಅಮರಮ್ಮ ಚಲುವಾದಿ, ಸಕೀನಮ್ಮ, ಹುಚ್ಚಮ್ಮ, ಹುಸೇನ್‌ಬಿ, ಗಂಗಮ್ಮ ಇದ್ದರು.