ಜಿಲ್ಲೆ

ಕಡಿಮೆ ವೇತನ ಕೆಲಸ ಹೆಚ್ಚು

ಮಸ್ಕಿ: ಪೌರ ಕಾರ್ಮಿಕರು ಸ್ವಚ್ಛತೆಯ ಸೈನಿಕರಿದ್ದಂತೆ. ಪಟ್ಟಣದ ಸೌಂದರ್ಯ ಹೆಚ್ಚಿಸುವಲ್ಲಿ, ನಾಗರಿಕರ ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಪ್ರಮುಖವಾಗಿದ್ದು, ಅವರನ್ನು ಗೌರವಿಸುವುದು ಸರ್ಕಾರ ಮತ್ತು ಸಾರ್ವಜನಿಕರ ಕೆಲಸವಾಗಿದೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಹಾಗೂ ಪುರಸಭೆಯಿಂದ ಆಯೋಜಿಸಿದ್ದ ಪೌರ ಕಾರ್ಮಿಕರ ದಿನದ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಪೌರ ಕಾರ್ಮಿಕರು ವೈಯಕ್ತಿಕ ಆರೋಗ್ಯದ ಬಗ್ಗೆ ನಿಗಾ ವಹಿಸದೆ ಊರಿನ ಸ್ವಚ್ಛತೆಗೆ ಮಹತ್ವ ಕೊಡುತ್ತಾರೆ. ವೇತನ ಕಡಿಮೆ ಕೆಲಸ ಹೆಚ್ಚು ಎನ್ನುವ ಸ್ಥಿತಿಯಲ್ಲಿ ಪೌರ ಕಾರ್ಮಿಕರು ಇದ್ದಾರೆ ಎಂದರು.

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ, ಪೌರ ಕಾರ್ಮಿಕರು ಸೂರ್ಯೋದಕ್ಕಿಂತ ಮುಂಚೆಯೆ ಊರಿನ ಸ್ವಚ್ಛತೆಗೆ ಮುಂದಾಗುತ್ತಾರೆ. ಪೌರ ಕಾರ್ಮಿಕರು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಂತೆ ಸಲಹೆ ನೀಡಿದರು. ಶಾಸಕರು ಮತ್ತು ಪುರಸಭೆ ಸದಸ್ಯರು ಪಟ್ಟಣದ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಬೇಕೆಂದು ತಿಳಿಸಿದರು.