ಜಿಲ್ಲೆ

ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಿಂದ ಕಬ್ಬಿಗೆ ಕಡಿಮೆ ದರ


ನಂಜನಗೂಡು : ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ರಾಜ್ಯದಲ್ಲಿಯೇ ಅತಿ ಕಡಿಮೆ ದರ ನೀಡುತ್ತಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.


ತಾಲೂಕಿನ ಅಳಗಂಚಿ ಗ್ರಾಮದ ಬಣ್ಣಾರಿ ಸಕ್ಕರೆ ಕಾರ್ಖಾನೆ ಮುಂಭಾಗ ಗುರುವಾರ ಕಬ್ಬು ಬೆಳೆಗಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಬಣ್ಣಾರಿ ಸಕ್ಕರೆ ಕಾರ್ಖಾನೆ ಕಳೆದ ವರ್ಷ 12.40 ಲಕ್ಷ ಟನ್ ಕಬ್ಬು ನುರಿಸಿ 9.14 ಟನ್ ಸಕ್ಕರೆ ಇಳುವರಿ ತೋರಿಸಿದ್ದಾರೆ. ಈ ವರ್ಷ 8 ಲಕ್ಷ ಟನ್ ಕಬ್ಬು ಮಾತ್ರ ರೈತರು ಬೆಳೆದಿದ್ದಾರೆ. ಸಕ್ಕರೆ ಕಾರ್ಖಾನೆಯವರು ರೈತರ ಸಂಘಟನೆಗಳನ್ನು ಒಡೆದು ಆಳುವ ಮೂಲಕ ನಿರಂತರವಾಗಿ ರೈತರನ್ನು ಶೋಷಣೆ ಮಾಡುತ್ತಿದೆ ಎಂದು ಕಿಡಿಕಾರಿದರು.


ಕಳೆದ ವರ್ಷ ಬರಗಾಲದ ಕಾರಣ ಶೇ.30 ರಷ್ಟು ಕಬ್ಬು ಕಡಿಮೆಯಾಗಿದೆ. ಸಕ್ಕರೆ ಕಾರ್ಖಾನೆಗಳು ಪ್ರಸ್ತುತ ರೈತರನ್ನು ಕಬ್ಬು ಬೆಳೆಯುವಂತೆ ಬೇಡುವ ಸ್ಥಿತಿ ಬಂದಿದೆ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿಯೇ ಈ ರೀತಿ ಆದರೆ ರಾಜ್ಯದ ರೈತರ ಗತಿ ಏನು ಎನ್ನುವಂತಾಗಿದೆ. ಕಬ್ಬು ಬೆಳೆಗಾರ ರೈತರು ಒಗ್ಗಟ್ಟಾಗಿ ಹೋರಾಟ ಮಾಡಿದರೆ ಖಂಡಿತ ನ್ಯಾಯ ಸಿಗುತ್ತದೆ. ನಾವು 2004ರಲ್ಲಿ ಚಳವಳಿ ಆರಂಭಿಸಿದಾಗ ಟನ್‌ಗೆ 800 ರೂ. ಇತ್ತು. ಇಂದು 3400 ರೂ.ಗಳನ್ನು ಸರ್ಕಾರ ನಿಗದಿ ಮಾಡಿದೆ. ಇದು ರೈತರ ಹೋರಾಟದ ಫಲ ಎಂಬುದನ್ನು ಮರೆಯಬಾರದು ಎಂದು ಹೇಳಿದರು.


ಸರ್ಕಾರ ಪ್ರಸಕ್ತ ಸಾಲಿನ ಟನ್ ಕಬ್ಬಿಗೆ 4 ಸಾವಿರ ರೂ. ನಿಗದಿ ಮಾಡಬೇಕು. ಕಳೆದ ವರ್ಷದ ಕಬ್ಬಿನ ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡಬೇಕು. 2022-23 ನೇ ಸಾಲಿನ ವರ್ಷದ ಕಬ್ಬಿನ ಎಫ್‌ಆರ್‌ಪಿ ಸರ್ಕಾರ ನಿಗದಿ ಮಾಡಿರುವ ಹೆಚ್ಚುವರಿ ದರ 150 ರೂ. ಕಾರ್ಖಾನೆ ಕೊಡಬೇಕು. ಬಣ್ಣಾರಿ ಸಕ್ಕರೆ ಕಾರ್ಖಾನೆ ಸರ್ಕಾರ ಜಾರಿ ಮಾಡಿರುವ ಒಪ್ಪಂದ ಪತ್ರ ಜಾರಿ ಮಾಡದೆ ರೈತರಿಗೆ ವಂಚನೆ ಮಾಡುತ್ತಿದೆ ಎಂದು ಕಿಡಿಕಾರಿದರು.


ಬಣ್ಣಾರಿ ಸಕ್ಕರೆ ಕಾರ್ಖಾನೆ ಕಾರ್ಯನಿರ್ವಾಹಕ ಅಧ್ಯಕ್ಷ ವೇಲುಸ್ವಾಮಿ ಮಾತನಾಡಿ, ಈ ವರ್ಷ ಟನ್ ಕಬ್ಬಿಗೆ 3150 ರೂ. ದರ ನಿಗದಿಯಾಗಿದೆ. ಕಬ್ಬು ನಾಟಿ ಮಾಡುವ ರೈತರಿಗೆ ಎಕರೆಗೆ 7 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುವುದು. ಕಳೆದ ವರ್ಷದ ಬಾಕಿ 150 ರೂ. ಪಾವತಿಸುವ ಬಗ್ಗೆ ಆಡಳಿತ ಮಂಡಳಿ ಜತೆ ಚರ್ಚೆ ಮಾಡಲಾಗುವುದು ಎಂದು ಹೇಳಿದರು.


ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ವಿಜಯೇಂದ್ರ , ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಶಂಕರ್, ನೀಲಕಂಠಪ್ಪ, ಅಂಬಳೆ ಮಂಜುನಾಥ್, ಸಿದ್ದೇಶ್, ರೇವಣ್ಣ, ಮಹದೇವಸ್ವಾಮಿ, ಶಿವಮೂರ್ತಿ, ಪೈಲ್ವಾನ್ ವೆಂಕಟೇಶ್, ಕಮಲಮ್ಮ ಉಪಸ್ಥಿತರಿದ್ದರು.