ಹಾವೇರಿ: ಕಡಿಮೆ ಬೆಲೆಗೆ ಸೈಟು ಕೊಡಿಸುವ ನೆಪದಲ್ಲಿ ಚೆನೈ ಮೂಲದ ವ್ಯಕ್ತಿಯೊಬ್ಬರಿಂದ 10 ಲಕ್ಷ ರೂ. ಪಡೆದು ಮೋಸ ಮಾಡಿರುವ ಘಟನೆ ತಾಲೂಕಿನ ಅಗಡಿ ಗ್ರಾಮದ ಬಳಿ ಸೋಮವಾರ ನಡೆದಿದೆ.
ಖಾಸಿಂ ಹಾಗೂ ರೋಹಿತ ಎಂಬುವರು ಮೋಸ ಮಾಡಿರುವ ಆರೋಪಿಗಳು.
ಇವರು ಚೆನೈ ನಗರದ ಅಬ್ದುಲ್ ರಾಜೀಕ್ ಅಬ್ದುಲ್ ಶೇಖ (28) ಎಂಬುವರಿಗೆ ಫೋನ್ ಮಾಡಿ ನಮ್ಮ ಬಳಿ ಒಂದು ಸೈಟು ಇದ್ದು ಅದರ ಬೆಲೆ 30 ಲಕ್ಷ ರೂ. ಆಗಿದೆ. ಆದರೆ, ನಮಗೆ ಅಡಚಣೆ ಇರುವುದರಿಂದ ಅದನ್ನು 10 ಲಕ್ಷ ರೂ. ನಿಮಗೆ ಕೊಡುತ್ತೇವೆ ಎಂದು ಅಬ್ದುಲ್ನನ್ನು ಇಲ್ಲಿಗೆ ಕರೆಯಿಸಿಕೊಂಡಿದ್ದಾರೆ. ಅದರಂತೆ ಅಬ್ದುಲ್ 10 ಲಕ್ಷ ರೂ. ನಗದು ತೆಗೆದುಕೊಂಡು ಅಗಡಿ ಗ್ರಾಮದ ಕಡೆ ಬಂದಾಗ ಆತನಿಗೆ ನಂಬಿಕೆ ಬರುವ ರೀತಿಯಲ್ಲಿ ಒಂದು ಖಾಲಿ ಸೈಟ ತೋರಿಸಿ 10 ಲಕ್ಷ ರೂ. ಪಡೆದುಕೊಂಡಿದ್ದಾರೆ. ನಂತರ ಅದಕ್ಕೆ ಸಂಬಂಧಿಸಿದ ಕಾಗದ ಪತ್ರ ಹಾಗೂ ಮಾಲೀಕರನ್ನು ಕರೆದುಕೊಂಡು ಬರುವುದಾಗಿ ಹೇಳಿ ಹೋದವರು ವಾಪಸ್ ಬಾರದೆ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.