ಜಿಲ್ಲೆ

ನ್ಯಾನೋ ಗೊಬ್ಬರದಿಂದ ವೆಚ್ಚ ಕಡಿಮೆ ಇಳುವರಿ ಅಧಿಕ

ಸೋಮನಾಥ ರೆಡ್ಡಿ

ಮುಂಡರಗಿ: ಬೆಳೆ ಉತ್ಪಾದನೆ ವೆಚ್ಚವನ್ನು ಕಡಿಮೆ ಮಾಡಲು ನ್ಯಾನೋ ಯೂರಿಯಾ, ಡಿಎಪಿ (ದ್ರವ) ಸರಿಯಾದ ಮಾರ್ಗವಾಗಿದೆ. ಇದು ಬೆಳೆಗೆ ಬೇಕಾಗಿರುವ ಸಾರಜನಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸುತ್ತದೆ. ಬೆಳೆ ಉತ್ಪಾದನೆ ಹೆಚ್ಚಿಸಿ ರೈತರ ಆದಾಯ ಹೆಚ್ಚಿಸುತ್ತದೆ ಎಂದು ಇಫ್ಕೋ ಸಂಸ್ಥೆ ಮುಖ್ಯಕಾರ್ಯದರ್ಶಿ ರಜಿನೀಶ ಪಾಂಡೆ ಹೇಳಿದರು.

ತಾಲೂಕಿನ ಕಲಕೇರಿ ಗ್ರಾಮದಲ್ಲಿ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ ಆಪರೇಟಿವ್ ಲಿ., ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಮೃಡಗಿರಿ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಮೊದಲಾದ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡ್ರೋನ್ ಮೂಲಕ ನ್ಯಾನೋ ಗೊಬ್ಬರಗಳ ಪ್ರಾತ್ಯಕ್ಷಿಕೆ ಹಾಗೂ ಸಹಕಾರ ಸಂಘಗಳ ರೈತ ಸದಸ್ಯರಿಗೆ ನ್ಯಾನೋ ಯೂರಿಯಾ, ಡಿಎಪಿ ಬಳಕೆ, ರೈತರ ಬೇಸಾಯ ಕ್ರಮಗಳ ಕುರಿತ ಸಹಕಾರ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೆಚ್ಚಾಗಿ ರಸಗೊಬ್ಬರ ಬಳಕೆಯಿಂದ ಭೂಮಿಯ ಸತ್ವ ಕಡಿಮೆಯಾಗುತ್ತಿದೆ. ಇದರಿಂದ ಮಣ್ಣು, ನೀರು, ಪರಿಸರ ಮಾಲಿನ್ಯತೆಯಾಗುತ್ತದೆ. ಬೆಳೆ ಸಹ ಕುಂಠಿತವಾಗುತ್ತದೆ. ಮಣ್ಣು, ಗಾಳಿ, ನೀರಿನ ಗುಣಮಟ್ಟ ಕಾಪಾಡುವಲ್ಲಿ ನ್ಯಾನೋ ಯೂರಿಯಾ, ಡಿಎಪಿ ದ್ರವ ಸಹಕಾರಿಯಾಗುತ್ತದೆ. ಇದರ ಬಳಕೆಯಿಂದ ಉತ್ತಮ ಇಳುವರಿ ಸಹ ಹೊಂದಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಎಸ್.ಎಸ್.ಪಾಟೀಲ ಮಾತನಾಡಿ, ಭೂತಾಯಿ ನಮ್ಮೆಲ್ಲರಿಗೂ ಬದುಕಲು ರಕ್ಷಣೆ ನೀಡುತ್ತದೆ. ಭೂಮಿ ಫಲವತ್ತತೆ ಕಾಪಾಡಬೇಕು. ರೈತರ ಮಕ್ಕಳು ಕೃಷಿಯಿಂದ ವಿಮುಖರಾಗದೆ ಕೃಷಿಯಲ್ಲಿ ತೊಡಗಬೇಕು ಎಂದರು.

ರಾಜ್ಯ ಇಫ್ಕೋ ಮಾರ್ಕೆಟಿಂಗ್ ವ್ಯವಸ್ಥಾಪಕ ಡಾ.ಸಿ.ನಾರಾಯಣಸ್ವಾಮಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಉಪಾಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ, ಡ್ರೋನ್ ಮೂಲಕ ನ್ಯಾನೋ ಗೊಬ್ಬರಗಳನ್ನು ಸಿಂಪಡಿಸುವುದರಿಂದ ಪರಿಸರ ಸಂರಕ್ಷಣೆಯಾಗುತ್ತದೆ. ಈ ತಂತ್ರಜ್ಞಾನ ಅಳವಡಿಸಿಕೊಂಡರೆ ರೈತರ ಆದಾಯ ದ್ವಿಗುಣವಾಗುವುದರ ಜತೆಗೆ ಪರಿಸರಕ್ಕೂ ಕೊಡುಗೆ ನೀಡಿದಂತಾಗುತ್ತದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ರೋಣ ಪುರಸಭೆ ಉಪಾಧ್ಯಕ್ಷ ಮಿಥುನ್‌ಗೌಡ ಪಾಟೀಲ ಮಾತನಾಡಿದರು. ಶಿವಪ್ರಕಾಶ ಮಹಾಜನಶೆಟ್ಟರ, ಸಿ. ಪಿಳ್ಳೆಗೌಡ, ಸಿ.ಕೆ. ಲಮಾಣಿ, ಧರ್ಮೇಂದ್ರ, ಮಲ್ಲಣ್ಣ ಕಲ್ಗುಡಿ, ಜಯಚಂದ್ರ, ಮಹಾಜನ, ಉಪಸ್ಥಿತರರು ಇದ್ದರು. ಚಂದ್ರಶೇಖರ ಕರಿಯಪ್ಪನವರ ಕಾರ್ಯಕ್ರಮ ನಿರೂಪಿಸಿದರು.