ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಮುದ್ದಲಪಲ್ಲಿಯಲ್ಲಿ ಪ್ರೇಮಿಗಳಿಬ್ಬರು ಸೊಂಟಕ್ಕೆ ವೇಲ್ ಸುತ್ತಿಕೊಂಡು ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದ ಎಂ.ಡಿ.ವೇಣು (21) ಮತ್ತು ಚೇಳೂರು ತಾಲೂಕಿನ ದೊಡ್ಡಹಳ್ಳಿಯ ಅನುಷಾ (19) ಮೃತರು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು ಇದರ ಬಗ್ಗೆ ತಿಳಿದ ಪೋಷಕರು ಒಪ್ಪಿಗೆ ನೀಡಿಲ್ಲ. ಮತ್ತೊಂದೆಡೆ ಅನುಷಾಳಿಗೆ ಚಿಂತಾಮಣಿ ತಾಲೂಕಿನ ಕಾಚಹಳ್ಳಿಯ ಯುವಕನೊಬ್ಬನಿಗೆ ಕಳೆದ 2024 ಮೇ.25 ರಂದು ಮದುವೆಯಾಗಿದ್ದು ದಂಪತಿ ಡಾಬಸ್ ಪೇಟೆಯ ಬಳಿ ಬಾಡಿಗೆ ಮನೆಯಲ್ಲಿ ಸಂಸಾರ ಸಮೇತ ವಾಸವಾಗಿದ್ದರು. ಇದರ ನಡುವೆ ಜು.7 ರಂದು ಅನುಷಾಳನ್ನು ಆಷಾಡ ಮಾಸದ ಹಿನ್ನೆಲೆಯಲ್ಲಿ ಆಕೆಯ ತಾಯಿಯ ತವರೂರು ಆದ ಚೇಳೂರು ತಾಲೂಕಿನ ಸೋಮನಾಥಪುರ ಸಮೀಪದ ದೊಡ್ಡಹಳ್ಳಿಗೆ ಗಂಡ ಬಿಟ್ಟು ಹೋಗಿದ್ದ. ಈ ಮಧ್ಯೆ ಅನುಷಾ ಬಾಗೇಪಲ್ಲಿ ಹೋಗಿ ಬರುವುದಾಗಿ ಪೋಷಕರಿಗೆ ಹೇಳಿ ಹೋದವಳು, ಸಂಜೆಯಾದರೂ ಮನೆಗೆ ವಾಪಸ್ ಬಂದಿಲ್ಲ. ಕೊನೆಗೆ ಹುಡುಕಾಡಿದಾಗ ಮುದ್ದಲಹಳ್ಳಿ ಸಮೀಪದ ಚಲಪತಿ ಎಂಬುವರ ಕೃಷಿ ಹೊಂಡದ ದಡದಲ್ಲಿ ಪರ್ಸ್, ಎರಡು ಮೊಬೈಲ್, ಚಪ್ಪಲಿಗಳು ಕಾಣಿಸಿವೆ. ಇದರ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಂಚರ‍್ಲಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.