ಹೊಳೆಹೊನ್ನೂರು: ಮಗಳನ್ನು ಅನ್ಯ ಜಾತಿಯ ಹುಡುಗನೊಬ್ಬ ಪ್ರೀತಿಸುತ್ತಿದ್ದಾನೆ ಎಂಬ ಕಾರಣಕ್ಕೆ ಹುಡುಗಿಯ ಮನೆಯವರು ಯುವಕನನ್ನು ಯುವತಿಯ ಮನೆಯೊಳಗೆ ಎಳೆದೊಯ್ದು ಮನಬಂದಂತೆ ಥಳಿಸಿದ್ದಾರೆ.
ಪಟ್ಟಣ ಸಮೀಪದ ಅರಕೆರೆಯ ಪವನ್ (25) ಎಂಬಾತ ಪೆಟ್ಟು ತಿಂದು ಆಸ್ಪತ್ರೆಗೆ ದಾಖಲಾದ ಪಾಗಲ್ ಪ್ರೇಮಿ. ಶುಕ್ರವಾರ ಯುವತಿಯ ಮನೆ ಮುಂಭಾಗ ಬೈಕ್‌ನಲ್ಲಿ ತೆರಳುತ್ತಿದ ಪವನ್‌ನನ್ನು ಅಡ್ಡಗಟ್ಟಿದ ಯುವತಿ ಮನೆಯವರು ಮನೆಯೊಳಗೆ ಎಳೆದೊಯ್ದು ಮನ ಬಂದಂತೆ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈತ ತಾನು ಕೆಲಸ ಮಾಡುತ್ತಿದ್ದ ಮನೆಯ ಹುಡುಗಿಯನ್ನು ಪ್ರೀತಿಸುತಿದ್ದ. ಆರಂಭದಲ್ಲಿ ಏನೂ ಆರಿದ ಹುಡುಗಿಯೂ ಪವನ್‌ನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈ ವಿಚಾರ ಯುವತಿಯ ಮನೆಯವರಿಗೆ ವಿಷಯ ಗೊತ್ತಾಗುತ್ತಿದಂತೆ ಪವನ್‌ಗೆ 4-5 ಬಾರಿ ಬುದ್ಧಿ ಹೇಳಿದ್ದಾರೆ. ಆದರೂ ಹಳೇ ಚಾಳಿಯನ್ನು ಮುಂದುವರಿಸಿದ ಪವನ್ ವಿಚಾರವಾಗಿ ರೋಸಿಹೋದ ಮನೆಯವರು ಆತನನ್ನು ಕೆಲಸದಿಂದ ಬಿಡಿಸಿ ಕಳುಹಿಸಿದ್ದಾರೆ. ಜತೆಗೆ ಯುವತಿಯನ್ನು ಊರು ಬಿಡಿಸಿ ಕಡೂರಿನ ಕಾಲೇಜೊಂದಕ್ಕೆ ದಾಖಲಿಸಿದ್ದಾರೆ. ಈ ಪ್ರೇಮ ವಿಚಾರ ಸ್ಥಳೀಯ ಮಠವೊಂದರ ಸ್ವಾಮೀಜಿಯೊಬ್ಬರ ಸಮ್ಮುಖದಲ್ಲಿ ರಾಜಿ ಪಂಚಾಯಿತಿಯಲ್ಲಿ ಇತ್ಯರ್ಥವಾಗಿತ್ತು.
ಎಲ್ಲವೂ ಸರಿಯಾಗಿದೆ ಎನ್ನುವಷ್ಟರಲ್ಲಿ ಪವನ್ ಅದೇ ಹಳೆ ಚಾಳಿಯನ್ನು ಮುಂದುವರಿಸಿದ್ದಾನೆ. ಎಷ್ಟು ಬುದ್ಧಿ ಹೇಳಿದರೂ ಕೇಳದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಯುವತಿಯ ಮನೆಯವರು ಸೇರಿಕೊಂಡು ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯುವಕ ಪವನ್ ಸದ್ಯ ಮೆಗ್ಗಾನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.