ಬೆಂಗಳೂರು: ಪ್ರೇಯಸಿಯ ಪತಿ ಕೈಗೆ ಸಿಕ್ಕಿಬಿದ್ದ ವ್ಯಕ್ತಿಯೊಬ್ಬ ತಪ್ಪಿಸಿಕೊಳ್ಳುವ ಬರದಲ್ಲಿ ನಿಷೇಧಿತ ಪ್ರದೇಶವಾದ ಎಚ್‌ಎಎಲ್ ಕಾಂಪೌಂಡ್ ಹಾರಿ ಪೊಲೀಸರ ಅತಿಥಿಯಾಗಿದ್ದಾನೆ. ನ.9ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಸ್ಸಾಂ ಮೂಲದ ಮುಕುಂದ ಖೌಂದ್ (36) ಬಂಧಿತ ಆರೋಪಿ.
ಆರೋಪಿ ಮುಕುಂದ, ಪೂರ್ವಿ ದೌಲಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಆಕೆ ತನ್ನ ಪತಿ ಬಿಪುಲ್ ದೌಲಿ ಜತೆ ಯಮಲೂರಿನಲ್ಲಿ ವಾಸವಾಗಿದ್ದಳು. ಈಕೆಯನ್ನು ಭೇಟಿಯಾಗಲು ಮುಕುಂದ ಅಸ್ಸಾಂನಿಂದ ಬಂದಿದ್ದ. ಈ ವೇಳೆ ಆಕೆಯ ಪತಿಯ ಕೈಗೆ ಸಿಕ್ಕಿಬಿದ್ದಿದ್ದ. ಆತನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಯಮಲೂರಿನ ಬಳಿ ಆಕಸ್ಮಿಕವಾಗಿ ಎಚ್‌ಎಎಲ್ ಕೌಂಪೌಂಡ್ ಹಾರಿದ್ದ.
ನ.9ರ ರಾತ್ರಿ 12.30ರ ಸಮಯದಲ್ಲಿ ವಿಮಾನ ನಿಲ್ದಾಣದ ಸೇವಾ ಕೇಂದ್ರದೊಳಗೆ ಅತಿಕ್ರಮ ಪ್ರವೇಶ ಮಾಡಿದ್ದ. ಎಚ್‌ಎಎಲ್ ವಿಮಾನ ನಿಲ್ದಾಣದ ಟ್ರಾಲಿಗೇಟ್ ಬಳಿ ಅಳವಡಿಸಲಾಗಿರುವ ಸೌರ ಫಲಕಗಳ ಅಡಿಯಲ್ಲಿ ಅಡಗಿಕೊಳ್ಳಲು ಯತ್ನಿಸುತ್ತಿದ್ದ ಈ ವೇಳೆ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದಿದ್ದ. ನಂತರ ಆತನನ್ನು ಭದ್ರತಾ ನಿಯಂತ್ರಣ ಕೊಠಡಿಗೆ ಕರೆತರಲಾಗಿದೆ. ನಂತರ ಸ್ಥಳದಲ್ಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿಯನ್ನು ಪರಿಶೀಲನೆ ನಡೆಸಿದ್ದಾಗ ಕೆಂಪಾಪುರ ರಸ್ತೆಯ ಶಿವ ದೇವಸ್ಥಾನದ ಎದುರಿನ ವಾಚ್ ಟವರ್ ಸಂಖ್ಯೆ 3ರ ಬಳಿ ವಿಮಾನ ನಿಲ್ದಾಣದ ಗೋಡೆಯನ್ನು ಏರಲು ಪ್ರಯತ್ನಿ ವಿಫಲವಾಗಿ ಬಳಿಕ ಟ್ರಾಲಿ ಗೇಟ್ ಬಳಿ ಸುತ್ತುವರೆದ ಗೋಡೆಯನ್ನು ಏರಿ ಎಎಚ್‌ಎಎಲ್ ಪ್ರವೇಶ ಮಾಡಿದ್ದಾನೆ. ಆತನನನ್ನು ವಿಚಾರಣೆಗೆ ಒಳಪಡಿಸಿದ್ದಾಗ ಕಳ್ಳತನ ಮಾಡುವ ಉದ್ದೇಶದಿಂದ ಎಚ್‌ಎಎಲ್ ಕಾಂಪೌಂಡ್ ಹಾರಿ ಬಂದಿರುವುದಾಗಿ ಆರೋಪಿ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಎಚ್‌ಎಎಲ್ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಿಷೇಧಿತ ಪ್ರದೇಶ ಎಂದು ತಿಳಿಯದ ವ್ಯಕ್ತಿಯೊಬ್ಬ ನ.9ರಂದು ಎಚ್‌ಎಎಲ್ ಕಾಂಪೌಂಡ್ ಹಾರಿ ಬಂದಿದ್ದ. ಈ ಸಂಬಂಧ ಮುಕುಂದ ಖೌಂದ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. | ಗಿರೀಶ್, ವೈಟ್‌ಫೀಲ್ಡ್ ಡಿಸಿಪಿ
ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದ ವೇಳೆ ಭದ್ರತಾ ವೈಫಲ್ಯವಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದು, ಅದನ್ನು ವೈಟ್‌ಫೀಲ್ಡ್ ಡಿಸಿಪಿ ಗಿರೀಶ್ ಅಲ್ಲಗಳೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡುವ ಒಂದು ದಿನದ ಮೊದಲು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಅಸ್ಸಾಂ ಮೂಲದ ಆಗುಂತಕ ವ್ಯಕ್ತಿಯೊಬ್ಬನನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ. ಇದು ಗುಪ್ತಚರ ಹಾಗೂ ಭದ್ರತಾ ವೈಫಲ್ಯ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದು, ಇದು ಸತ್ಯಕ್ಕೆ ದೂರವಾದುದು ಎಂದು ತಿಳಿಸಿದ್ದಾರೆ.
ನಿಷೇಧಿತ ಪ್ರದೇಶ ಎಂದು ತಿಳಿಯದ ವ್ಯಕ್ತಿಯೊಬ್ಬ ನ.9ರಂದು ವಿಮಾನ ನಿಲ್ದಾಣ ಸೇವಾ ಕೇಂದ್ರ (ಎಚ್‌ಎಎಲ್) ಕಾಂಪೌಂಡ್ ಹಾರಿ ಬಂದಿದ್ದ. ಈ ಸಂಬಂಧ ಮುಕುಂದ ಖೌಂದ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಿಸಿಪಿ ಗಿರೀಶ್ ಸ್ಪಷ್ಟಪಡಿಸಿದ್ದಾರೆ.