ಹುಬ್ಬಳ್ಳಿ: ಇಲ್ಲಿಯ ಆನಂದನಗರ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆ ಹಾಗೂ ಶ್ರೀ ಸದ್ಗುರು ಸಿದ್ಧಾರೂಢಸ್ವಾಮಿ ಅಂಧ ಮಕ್ಕಳ ಶಾಲೆಯಲ್ಲಿ ಮಜೇಥಿಯಾ ಫೌಂಡೇಷನ್ ವತಿಯಿಂದ ಲೂಯಿಸ್ ಬ್ರೈಲ್ 216ನೇ ಜನ್ಮದಿನ ಆಚರಿಸಲಾಯಿತು.
ಲೂಯಿಸ್ ಬ್ರೈಲ್ ಜನ್ಮದಿನ ಪ್ರಯುಕ್ತ 105 ಇಂಟರ್ ಪಾಯಿಂಟ್ ಸ್ಲೇಟು, ಬೆಲ್ ಪೇಪರ್, ಇತರ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.
ವಿದ್ಯಾರ್ಥಿಗಳಿಗೆ ರೇಡಿಯೋ ಹಾಗೂ ಪ್ರತಿಭಾ ಪುರಸ್ಕಾರವನ್ನು ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಅವರು ವಿತರಣೆ ಮಾಡಿ ಅಂಧ ಮಕ್ಕಳಿಗೆ ಅನುಕೂಲ ಒದಗಿಸಿದರು.
ಬ್ರೈಲ್ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಗೌರವ ಸಲ್ಲಿಸಲಾಯಿತು.
ಧಾರವಾಡದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಕೆ. ಅವರು ಮಾತನಾಡಿ, ಜಗತ್ತಿಗೆ ಲೂಯಿಸ್ ಬ್ರೈಲ್ ಅವರ ಕೊಡುಗೆ ಅಪಾರ. ಅವರ ಸಾಧನೆ ಹಾಗೂ ಜೀವನವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಸ್ಪೂರ್ತಿಯಾಗಿ ಪಡೆದುಕೊಳ್ಳಬೇಕು ಎಂದರು.
ಮಜೇಥಿಯಾ ಫೌಂಡೇಷನ್ ಸಾಮಾಜಿಕ ಸೇವಾ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ. ಅದರಲ್ಲೂ ಅಂಗವಿಕಲರ ಸೇವಾ ಕಾರ್ಯದಲ್ಲಿ ಸದಾ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಸಲಕರಣೆಗಳನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಮಾತನಾಡಿ, ವಿಶೇಷ ಚೇತನ ಮಕ್ಕಳು ದೇವರ ಸಮಾನ. ಇಂತಹ ಮಕ್ಕಳ ಶಾಲೆ ನಡೆಸುವುದು, ಕಲಿಸುವುದು ಬಹಳ ಕಷ್ಟದ ಕಾರ್ಯ. ಅದನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಬರುತ್ತಿರುವ ಎರಡು ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದರು.
ಸಕ್ಷಮದ ಅಧ್ಯಕ್ಷ ಸುನೀಲ್ ಗೋಖಲೆ, ಅಂಧ ಬಾಲಕರ ಸರ್ಕಾರಿ ಪಾಠಶಾಲೆಯ ಅಧೀಕ್ಷಕ ರಾಜಕುಮಾರ ಸಾಬೋಜಿ, ಸದ್ಗುರು ಸಿದ್ಧಾರೂಢಸ್ವಾಮಿ ಅಂಧ ಮಕ್ಕಳ ಪಾಠಶಾಲೆಯ ಗುರುಸಿದ್ದೇಶ್ವರ ಲಕ್ಕುಂಡಿ, ಫೌಂಡೇಷನ್ ಟ್ರಸ್ಟಿ ಡಾ. ರಮೇಶ ಬಾಬು ಮಾತನಾಡಿದರು.
ಫೌಂಡೇಷನ್ ಟ್ಟಸ್ಟಿಗಳಾದ ಡಾ. ವಿ.ಬಿ. ನಿಟಾಲಿ, ಪ್ರಲ್ಹಾದರಾವ್ ಹಾಗೂ ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಸುನೀಲಕುಮಾರ ಕುಕ್ಕನೂರ, ನವೀನ ಮಾಲಿನ, ಪಾಂಡುರಂಗ ಮುಸಳೆ, ರೋಹನ ಗೊಂದಕರ ಇತರರು ಉಪಸ್ಥಿತರಿದ್ದರು.
ಅಣ್ಣಪ್ಪ ಕೊಡೆ ಸ್ವಾಗತಿಸಿದರು. ಎಚ್.ಎಸ್. ಅಡವಿಶಯ್ಯ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾವತಿ ಬಾಕಳೆ ವಂದಿಸಿದರು.