ಲೋಕಸಭೆ ಚುನಾವಣೆಯ ಮತ ಎಣಿಕೆ ದಿನ ಬಿಕೋ ಎನ್ನುತ್ತಿದ್ದ ಜಿಲ್ಲಾ ಕಾಂಗ್ರೆಸ್ ಕಚೇರಿ. 
ಜಿಲ್ಲೆ

ಲೋಕಾ ಕಣದಲ್ಲಿ ‘ಕೈ’ ತಪ್ಪಿದ ಮತಗಳು!

ಅರವಿಂದ ಅಕ್ಲಾಪುರ

ಅರವಿಂದ ಅಕ್ಲಾಪುರ ಶಿವಮೊಗ್ಗ
ಕಳೆದ 15 ವರ್ಷಗಳಲ್ಲಿ ನಡೆದ ಲೋಕಸಭೆ ಚುನಾವಣೆಗಳೆಲ್ಲವೂ ಕಾಂಗ್ರೆಸ್ ನಾಯಕರನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿವೆ. 2023ರ ವಿಧಾನಸಭೆ ಎಲೆಕ್ಷನ್‌ನಲ್ಲಿ ಗಳಿಸಿದ್ದನ್ನು ಈ ವರ್ಷ ಲೋಕಸಭೆಯಲ್ಲಿ ಕಳೆದುಕೊಂಡಿರುವುದು ಪಕ್ಷದ ಮುಖಂಡರನ್ನು ಚಿಂತೆಗೀಡುಮಾಡಿದೆ.

ಮೂರು ಕ್ಷೇತ್ರಗಳಲ್ಲಿ ಈಡಿಗ ಮತಗಳನ್ನೇ ನಂಬಿಕೊಂಡು ಲೀಡ್ ನಮ್ಮದೇ ಎನ್ನುತ್ತಿದ್ದ ಕಾರ್ಯಕರ್ತರು ಈಗ ಮೌನವಾಗಿದ್ದಾರೆ. ಜಾತಿಯೂ ಕೈ ಹಿಡಿಯಲಿಲ್ಲ. ಗ್ಯಾರಂಟಿಯೂ ರಕ್ಷಣೆ ನೀಡಲಿಲ್ಲ. ಹೀಗಾಗಿ ಯಾವ ಕ್ಷೇತ್ರದಲ್ಲೂ ಮುನ್ನಡೆ ಸಿಗಲೇ ಇಲ್ಲ. ಇದರ ಪರಿಣಾಮವಾಗಿ ಲೋಕಸಭೆ ಚುನಾವಣೆಯಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಬಿಜೆಪಿ ಭದ್ರಕೋಟೆಯನ್ನು ಭೇದಿಸಬೇಕು ಎಂಬ ಮಹದಾಸೆಯಿಂದ ಕೆಪಿಸಿಸಿ ನಾಯಕರು ಶಿವಮೊಗ್ಗ ಜಿಲ್ಲೆಗೆ ಇನ್ನಿಲ್ಲದ ಮಹತ್ವ ನೀಡಿದ್ದರು. ಪಕ್ಷದ ಮೂವರು ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನ, ಇಬ್ಬರಿಗೆ ನಿಗಮ-ಮಂಡಳಿಯನ್ನೂ ನೀಡಿದ್ದರು. ಇಷ್ಟೂ ಸಾಲದೆಂಬಂತೆ ಮತ್ತೂ ಮೂವರಿಗೆ ನಿಗಮ-ಮಂಡಳಿ ಅಧಿಕಾರ ದೊರೆತಿತ್ತು.
ಶಿವಮೊಗ್ಗ ಗ್ರಾಮಾಂತರ ಹಾಗೂ ಭದ್ರಾವತಿಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದೆ ಕಾಂಗ್ರೆಸ್ ಆಟ ನಡೆಯಲಿಲ್ಲ ಎಂದಿಟ್ಟುಕೊಂಡರೂ ಉಳಿದ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ತೀವ್ರ ಹಿನ್ನಡೆ ಅನುಭವಿಸಿದ್ದಕ್ಕೆ ಕಾರಣಗಳೇನು ಎಂಬುದನ್ನು ಸ್ವಯಂವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ.
ವಿಧಾನಸಭೆ ಚುನಾವಣೆಯಲ್ಲಿ ಮಧು ಬಂಗಾರಪ್ಪ 98 ಸಾವಿರ ಮತ ಪಡೆದಿದ್ದರು. ಆದರೆ ಈಗ ಅವರ ಸಹೋದರಿಗೆ ಸಿಕ್ಕಿದ್ದು 88 ಸಾವಿರ ಮಾತ್ರ. ಸ್ವಕ್ಷೇತ್ರದಲ್ಲೇ ಮತಬೇಟೆಯ ಅವಕಾಶ ಕೈಚೆಲ್ಲಿದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಉಳಿದ ಕ್ಷೇತ್ರಗಳೂ ಕಬ್ಬಿಣದ ಕಡಲೆಯಂತಾದವು.
ಒಳಗೊಳಗೇ ಅಸಮಾಧಾನ:ಎರಡು ಬಾರಿ ಜೆಡಿಎಸ್ ಪಕ್ಷದಿಂದ ಸಂಸತ್‌ಗೆ ಸ್ಪರ್ಧಿಸಿದ್ದ ಮಧು ಬಂಗಾರಪ್ಪ ಅವರಿಗೆ ಮೈತ್ರಿ ಧರ್ಮಪಾಲನೆಯ ಕಾರಣದಿಂದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಂಪೂರ್ಣ ಸಹಕಾರ ನೀಡಿದರು. ಅದಾದ ಬಳಿಕ ಕಾಂಗ್ರೆಸ್ ಸೇರ್ಪಡೆಯಾದ ಮಧು ಶಾಸಕರಾಗಿ ಸಚಿವರೂ ಆದರು. ಸಹೋದರಿ ಗೀತಾಗೆ ಲೋಕಸಭೆ ಟಿಕೆಟ್ ತಂದರು. ಇದು ಪಕ್ಷದ ಹಿರಿಯರಿಗೆ ಅಸಮಾಧಾನ ಉಂಟು ಮಾಡಿತು. ಆದರೂ ನಗುತ್ತಲೇ ಒಲ್ಲದ ಮನಸ್ಸಿನಿಂದ ಕೆಲಸ ಮಾಡಿದ್ದರ ಪರಿಣಾಮವೇ ಈ ಚುನಾವಣೆಯ ಫಲಿತಾಂಶ.
ಫಲಿಸಲಿಲ್ಲ ಜಾತಿ ಲೆಕ್ಕಾಚಾರ:ಸೊರಬ, ಸಾಗರದ ಈಡಿಗ, ಬೈಂದೂರಿನ ಬಿಲ್ಲವ ಸಮಾಜ ಸಂಪೂರ್ಣ ಕೈ ಹಿಡಿಯುತ್ತವೆ ವಿಶ್ವಾಸ ಆ ಪಕ್ಷದ ನಾಯಕರಲ್ಲಿತ್ತು. ಆದರೆ ಎಲ್ಲವೂ ಉಲ್ಟಾ ಆಯಿತು. ಬೈಂದೂರಿನಲ್ಲಿ ಸುಕುಮಾರ ಶೆಟ್ಟಿ ಪ್ರಭಾವವೂ ಮತವಾಗಿ ಪರಿವರ್ತನೆಯಾಗಲಿಲ್ಲ. ಸಾಲದ್ದಕ್ಕೆ ಕಡೆಯ ನಾಲ್ಕಾರು ದಿನ ಫುಲ್ ಆ್ಯಕ್ಟೀವ್ ಆದ ಕುಮಾರ್ ಬಂಗಾರಪ್ಪ, ಸಹೋದರ, ಸಹೋದರಿ ವಿರುದ್ಧ ಸಿಡಿದೆದ್ದರು. ಸೊರಬದಲ್ಲಿ ಬಿಜೆಪಿ ಕೈ ಮೇಲಾಯಿತು. ಸಾಗರದಲ್ಲಿ ಬೇಳೂರು ಬಿಜೆಪಿ ವಿರುದ್ಧ ಟೀಕಿಸುವುದಕ್ಕೆ ಹೆಚ್ಚು ಸಮಯ ವ್ಯಯ ಮಾಡಿದರು. ಇತ್ತ ಭದ್ರಾವತಿಯಲ್ಲಿ ಸಂಗಮೇಶ್ವರ್ ಸಹೋದರರ ಶ್ರಮ ಮೈತ್ರಿ ಮುಂದೆ ಕರಗಿಹೋಯಿತು.
ಸ್ವಯಂಕೃತ ಅಪರಾಧ:ನಾನು ಹೇಳಿದ್ದಷ್ಟನ್ನೇ ಬರೆದುಕೊಳ್ಳಿ. ನನಗೆ ಅಂತಹ ಪ್ರಶ್ನೆ ಕೇಳಬೇಡಿ. ಇನ್ನು ಸದ್ಯಕ್ಕೆ ನನ್ನ ಬಳಿ ಯಾವುದಕ್ಕೂ ಪ್ರತಿಕ್ರಿಯೆ ಕೇಳಬೇಡಿ ಎಂದು ಸಚಿವರಾದ ಕೆಲ ದಿನದಲ್ಲೇ ಮಾಧ್ಯಮದವರಿಗೆ ಉದ್ಧಟತನದ ಮಾತುಗಳನ್ನಾಡಿದ್ದ ಮಧು ಬಂಗಾರಪ್ಪ, ಪಕ್ಷದ ವೇದಿಕೆಯಲ್ಲೂ ಯಾರ ಸಲಹೆಯನ್ನೂ ಸ್ವೀಕರಿಸುವ ಮನಸ್ಥಿತಿಯಲ್ಲಿ ಇರಲಿಲ್ಲ. ನಾನು ಹೇಳಿದ್ದಷ್ಟನ್ನು ಮಾಡಿ ಎಂದು ಮುಖಂಡರ ಮೇಲೆ ಹಕ್ಕು ಚಲಾಯಿಸಲು ಮುಂದಾದ ನಿದರ್ಶನಗಳು ಅನೇಕ. ಅವರ ಸ್ವಯಂಕೃತ ಅಪರಾಧಗಳು ಮತಗಳಿಕೆ ಮೇಲೆ ಪರಿಣಾಮ ಬೀರಿದವು.