ಜಿಲ್ಲೆ

ಗೇರು ಬೆಳೆಗಾರರಿಗೆ ತಪ್ಪದ ಸಂಕಷ್ಟ

ಪುರುಷೋತ್ತಮ ಪೆರ್ಲ ಕಾಸರಗೋಡು

ಗೇರುಬೀಜ ಧಾರಣೆಯಲ್ಲಿ ಗಣನೀಯ ಕುಸಿತ ಉಂಟಾಗಿದ್ದು, ಜಿಲ್ಲೆಯಲ್ಲಿ ಗೇರುಬೆಳೆಗಾರರ ಪಾಡು ಹೇಳತೀರದಾಗಿದೆ. ವರ್ಷದ ಹಿಂದೆ ಕಿಲೋ ಒಂದಕ್ಕೆ 100ರಿಂದ 120 ರೂ.ವರೆಗೆ ಇದ್ದ ಧಾರಣೆ, ಇದೀಗ 90 ರೂ. ಅಂಚಿಗೆ ಕುಸಿದಿರುವುದು ಗೇರು ಬೆಳೆಗಾರರಲ್ಲಿ ನಿರಾಶೆ ಮೂಡಿಸಿದೆ.

ಪ್ರತಿ ವರ್ಷ ಆರಂಭದಲ್ಲಿ ಕಿಲೋ ಒಂದಕ್ಕೆ 100 ರೂ.ಗೆ ಖರೀದಿಯಾಗಿ, ನಂತರದ ದಿನಗಳಲ್ಲಿ ಬೆಲೆ ಏರುಮುಖವಾಗಿತ್ತು. ಆದರೆ ಈ ಬಾರಿ 90 ರೂ.ನಿಂದ 100 ರೂ. ಅಂಚಿಗೆ ತಲುಪಿ, ಪ್ರಸಕ್ತ 90 ರೂ.ಗೆ ಸ್ಥಿರಗೊಂಡಿದೆ. ಸಂಸ್ಕರಿತ ಗೋಡಂಬಿ ಕೆ.ಜಿ.ಗೆ 1,200 ರೂ.ನಿಂದ 1500 ರೂ. ಧಾರಣೆಯಿದೆ. ಒಂದು ಕೆ.ಜಿ. ಗೇರುಬೀಜಕ್ಕೆ 90 ರೂ. ಲಭಿಸುತ್ತಿದ್ದು, ಬೆಳೆಗಾರರಿಗೆ ಕನಿಷ್ಠ ಬೆಲೆ ದೊರೆಯುತ್ತಿದೆ. ಕೇರಳದಲ್ಲಿ ಕುಟುಂಬಶ್ರೀ ಮೂಲಕ ಹಲವಾರು ಸಣ್ಣ ಉದ್ದಿಮೆಗಳು ಗೋಡಂಬಿಯನ್ನು ಆಶ್ರಯಿಸಿ ನಡೆಯುತ್ತಿದೆ.

ಗಣನೀಯ ಕುಸಿತ

ಮಲೆನಾಡು ಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ ವ್ಯಾಪಕವಾಗಿದ್ದ ಗೇರು ಕೃಷಿ ಇಂದು ಗಣನೀಯವಾಗಿ ಕುಸಿದಿದೆ. ಇಂದಿಗೂ ಗೇರು ಕೃಷಿ ಆಶ್ರಯಿಸಿ ಜೀವನ ಸಾಗಿಸುತ್ತಿರುವ ನೂರಾರು ಮಂದಿ ಕೃಷಿಕರು ಜಿಲ್ಲೆಯಲ್ಲಿದ್ದಾರೆ. 2010ರ ಕಾಲಾವಧಿಯಲ್ಲಿ ರಬ್ಬರ್ ಧಾರಣೆ ಕಿಲೋ ಒಂದಕ್ಕೆ 240 ರೂ. ಅಂಚಿಗೆ ತಲುಪುತ್ತಿದ್ದಂತೆ ಬಹುತೇಕ ಮಂದಿ ಗೇರು ಮರ ಕಡಿದು ರಬ್ಬರ್ ಕೃಷಿ ನಡೆಸಿದ್ದರು. ರಬ್ಬರ್ ಬೆಲೆ ಕುಸಿತ ಕಾಣುತ್ತಿದ್ದಂತೆ ಮತ್ತೆ ರಬ್ಬರ್ ಜಾಗದಲ್ಲಿ ಗೇರು ಕೃಷಿ ಬಂದರೂ, ಬೆಲೆ ಕುಸಿತ ಈ ವಲಯವನ್ನು ಕಂಗಾಲಾಗಿಸಿದೆ.

ಸೊರಗುತ್ತಿದೆ ಗೇರು ತೋಟ

ಇನ್ನು ಕೇರಳ ತೋಟಗಾರಿಕಾ ನಿಗಮದ ಗೇರು ವಿಭಾಗವೂ ಗೇರು ಕೃಷಿಯನ್ನು ಕೈಬಿಡಲಾರಂಭಿಸಿದೆ. ಕಾಸರಗೋಡು ಜಿಲ್ಲೆಯ ಮುಳಿಯಾರ್, ಪೆರಿಯ, ಚೀಮೇನಿ ಎಸ್ಟೇಟ್ ಸೇರಿದಂತೆ ವಿವಿಧ ಬ್ಲಾಕ್‌ಗಳಲ್ಲಿ ನಡೆಸಲಾಗುತ್ತಿದ್ದ ಗೇರು ತೋಟಗಳು ಇಂದು ಸೊರಗುತ್ತಿದೆ. ಕೆಲವು ಬ್ಲಾಕ್‌ಗಳಲ್ಲಿ ಗೇರುಮರ ಕಡಿದು ರಬ್ಬರ್ ಬೆಳೆಸಲಾಗಿದ್ದರೂ, ರಬ್ಬರ್ ಬೆಲೆ ಕುಸಿತದಿಂದ ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ. ಪ್ರತಿವರ್ಷ ತೋಟಗಾರಿಕಾ ನಿಗಮದ ಗೇರುತೋಟಗಳಿಂದ ಗೇರುಬೀಜ ಸಂಗ್ರಹಕ್ಕೆ ಭಾರಿ ಮೊತ್ತಕ್ಕೆ ಹರಾಜು ನಡೆಯುತ್ತಿದ್ದರೆ, ಕೆಲವು ವರ್ಷಗಳಿಂದೀಚೆಗೆ ಗೇರು ತೋಟಗಳತ್ತ ಬಿಡ್‌ದಾರರು ಮುಖ ಮಾಡುತ್ತಿಲ್ಲ. ತೋಟಗಾರಿಕಾ ನಿಗಮದ ಗೇರು ತೋಟಗಳಿಂದ ಲಭ್ಯವಾಗುವ ಗೇರುಬೀಜ ಅತ್ಯಂತ ಉತ್ಕೃಷ್ಟ ಎಂಬ ಕಾರಣದಿಂದ ಗೇರು ಬೀಜ ಭಾರಿ ಬೇಡಿಕೆಯನ್ನೂ ಉಳಿಸಿಕೊಂಡಿತ್ತು. ಪ್ರಸಕ್ತ ಗೇರುತೋಟದಿಂದ ಗೇರುಬೀಜ ಸಂಗ್ರಹಕ್ಕೆ ಗುತ್ತಿಗೆ ವಹಿಸಿಕೊಂಡವರೂ, ಇಳುವರಿ ಹಾಗೂ ಬೆಲೆ ಕುಸಿತದಿಂದ ಕೈಸುಟ್ಟುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.

ಇತರ ಬೆಳೆಗಳಂತೆ ಗೇರುಬೀಜಕ್ಕೆ ಬೆಂಬಲ ಬೆಲೆ ಘೋಷಿಸಲು ಸರ್ಕಾರ ಮುಂದಾಗಬೇಕು. ಈ ಮೂಲಕ ಗೇರು ಬೆಳೆಯನ್ನುಆಶ್ರಯಿಸಿ ಜೀವನ ಸಾಗಿಸುತ್ತಿರುವ ನೂರಾರು ಕುಟುಂಬಗಳನ್ನು ಸಂರಕ್ಷಿಸಲು ಸರ್ಕಾರ ಮುಂದಾಗಬೇಕು. ಇದರಿಂದ ಗೇರುಬೀಜ ಕೃಷಿಯ ಉತ್ತೇಜನಕ್ಕೂ ಸಹಕಾರಿಯಾಗಲಿದೆ.- ಪಿ. ಸದಾಶಿವ ಭಟ್ ಹರಿನಿಲಯ,ಪ್ರಗತಿಪರ ಕೃಷಿಕ, ಬಜಕೂಡ್ಲು https://www.vijayavani.net/raitha-sangha-pressmeet https://www.vijayavani.net/kalikamba-temple-3