ಜಿಲ್ಲೆ

ಗೋಹತ್ಯೆ ನಿಷೇಧದಿಂದ ರೈತರಿಗೆ ನಷ್ಟ, ಮಾಜಿ ಸಚಿವ ಕೃಷ್ಣಭೈರೇಗೌಡ ಅಭಿಮತ, ಮೆಣಸಿ ಕಾಲನಿಯಲ್ಲಿ ಡೇರಿ ಕಟ್ಟಡಕ್ಕೆ ಚಾಲನೆ

ದೊಡ್ಡಬಳ್ಳಾಪುರ: ರಾಜಕೀಯ ಲಾಭಕ್ಕಾಗಿ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಇದರಿಂದ ರೈತರಿಗೆ ನಷ್ಟವೇ ಹೊರತು ಲಾಭವಿಲ್ಲ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ಹೇಳಿದರು.

ತಾಲೂಕಿನ ಮೆಣಸಿ ಕಾಲನಿಯಲ್ಲಿ ನಿರ್ಮಿಸಿರುವ ಹಾಲು ಉತ್ಪಾದಕ ಸಹಕಾರಿ ಸಂಘದ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಕನಿಷ್ಠ ರೈತರ ಸಮಸ್ಯೆ ಕೇಳಲೂ ಪ್ರಧಾನಿ ನರೇಂದ್ರ ಮೋದಿಗೆ ಸೌಜನ್ಯವಿಲ್ಲ. ಜನರೆ ಹೊಟ್ಟೆ ತುಂಬುತ್ತಿರುವುದು ಅಂಬಾನಿ, ಅದಾನಿಯಿಂದಲ್ಲ. ಪ್ರಧಾನಿ ಮೋದಿ ಮೊದಲು ರೈತರ ಸಮಸ್ಯೆ ಕೇಳಬೇಕು ಎಂದರು.

ಗೋಹತ್ಯೆ ನಿಷೇಧ ಕಾಯ್ದೆ ಕೇವಲ ರಾಜಕೀಯ ಲಾಭಕ್ಕಾಗಿ ಮತ್ತು ಸಮಾಜದಲ್ಲಿನ ಜನರನ್ನು ಒಡೆದು ಆಳುವ ನೀತಿ ಎದ್ದು ಕಾಣುತ್ತಿದೆ. ರೈತರ ಬಗ್ಗೆ, ಗೋವುಗಳ ಬಗ್ಗೆ ಕಾಳಜಿ ಇದ್ದರೆ ಪ್ರತಿ ಹೋಬಳಿ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಗೋಶಾಲೆಗಳನ್ನು ತೆರೆಯಲಿ. ರೈತರಿಗೆ ಬೇಡವಾದ ಜಾನುವಾರುಗಳನ್ನು ಗೋಶಾಲೆಗೆ ಬಿಡುತ್ತಾರೆ. ರೈತರು ಬಿಡುವ ಜಾನುವಾರುಗಳಿಗೆ ಸರ್ಕಾರವೇ ಹಣ ನೀಡಲಿ. ಈ ಮೂಲಕ ರೈತರ ನೆರವಿಗೆ ಬರಲಿ, ನಾವು ಕೂಡ ಸಹಕಾರ ನೀಡುತ್ತೇವೆ. ರೈತ ಸಮುದಾಯ ಈಗಾಗಲೇ ಐಸಿಯುನಲ್ಲಿದೆ. ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರವನ್ನು ಖಾಸಗೀಕರಣ ಮಾಡಿದರೆ ಆಶ್ಚರ್ಯವಿಲ್ಲ. ಸದ್ಯಕ್ಕೆ ಹಸುಗಳನ್ನು ಸಾಕಿ ಡೇರಿಗಳಿಗೆ ಹಾಲು ಹಾಕಿ ಬಡ ರೈತರು ಜೀವನ ನಡೆಸುತ್ತಿದ್ದಾರೆ. ರೈತರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಡೇರಿಗಳ ಪರಿಸ್ಥಿತಿಯೂ ಹೇಳತೀರದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

1ರಿಂದ ಹಾಲಿನ ಬೆಲೆ ಎರಡು ರೂ. ಏರಿಕೆ: ಕರೊನಾ ಹಾಗೂ ಲಾಕ್‌ಡೌನ್ ಸಂದರ್ಭದಲ್ಲಿ ಬಮುಲ್ ವ್ಯಾಪ್ತಿಯಲ್ಲಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಕಡಿತಗೊಳಿಸಲಾಗಿತ್ತು. ಈಗ ಬಮುಲ್ ಚೇತರಿಕೆ ಕಾಣುತ್ತಿದ್ದು, ಫೆ.1 ರಿಂದ ಪ್ರತಿ ಲೀಟರ್ ಹಾಲಿಗೆ 2 ರೂ. ಏರಿಕೆ ಮಾಡಲಾಗುವುದು ಎಂದು ಕೆಎಂಎಫ್ ಹಾಗೂ ಬಮುಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ತಿಳಿಸಿದರು.

ಮುಂದಿನ ದಿನಗಳಲ್ಲಿ ಖರ್ಚು ವೆಚ್ಚ ಸರಿದೂಗಿಸಿ ಮತ್ತಷ್ಟು ಏರಿಕೆ ಮಾಡಲಾಗುವುದು. ರೈತರು ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿಸಿಕೊಂಡರೆ ಬಮುಲ್ ಅವರ ಬೆನ್ನಿಗೆ ನಿಂತಿರುತ್ತದೆ ಎಂದರು.

ದೊಡ್ಡಬಳ್ಳಾಪುರ ಬಮುಲ್ ಕಚೇರಿ ಉಪ ವ್ಯವಸ್ಥಾಪಕ ಗೋಪಾಲಕೃಷ್ಣ, ಇಒ ಅಶ್ವತ್ಥ್, ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಪುಟ್ಟರಾಜು, ಮುಖಂಡರಾದ ರಾಮಕೃಷ್ಣ ಮತ್ತಿತರರಿದ್ದರು.