ಜಿಲ್ಲೆ

ನಗರ ಸ್ಥಳೀಯ ಸಂಸ್ಥೆಗಳಲ್ಲಿ 10-15 ವರ್ಷಗಳಿಂದ ಬೀಡು ಬಿಟ್ಟವರಿಂದ ಆದಾಯ ನಷ್ಟ-ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌

ಕಾರವಾರ: ಅವೈಜ್ಞಾನಿಕ ಕರ ವಸೂಲಿ ಪದ್ಧತಿ ಹಾಗೂ ಹಲವು ವರ್ಷಗಳಿಂದ ಒಂದೇ ಕಡೆ ಬೀಡು ಬಿಟ್ಟಿರುವ ಅಧಿಕಾರಿಗಳ ಕಾರಣದಿಂದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ನಷ್ಟದಲ್ಲಿವೆ. ಈ ಅವ್ಯವಸ್ಥೆ ಸರಿ ಮಾಡುವ ಕೆಲಸ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಜಿಲ್ಲೆಯ ಬಹುತೇಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಏಳೆಂಟು ವರ್ಷಗಳ ಹಿಂದಿನ ಕರ ವಸೂಲಿ ಬಾಕಿ ಇರಿಸಿಕೊಳ್ಳಲಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಕರದ ದರ ಪರಿಷ್ಕರಣೆ ಮಾಡಿಲ್ಲ. ಖಾಲಿ ಸೈಟ್‌ಗಳು, ವಾಣಿಜ್ಯ ಕಟ್ಟಡಗಳನ್ನು ಕರ ಆಕರಣೆ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಕಚ್ಚಾ ಮನೆ, ಪಕ್ಕಾ ಮನೆ, ವಾಣಿಜ್ಯ ಕಟ್ಟಡಗಳಿಗೆ ಪ್ರತ್ಯೇಕ ಕರದ ಸ್ಲ್ಯಾಬ್‌ ಇದ್ದು, ಅವುಗಳ ಮೌಲ್ಯಮಾಪನ ಸರಿಯಾಗಿ ಮಾಡಿಲ್ಲ. ಇದರಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಆದಾಯದ ಖೋತಾ ಆಗುತ್ತಿದೆ ಎಂದರು.
ನಗರ ಸ್ಥಳೀಯ ಸಂಸ್ಥೆಗಳ ಒಟ್ಟಾರೆ ಆದಾಯದ ಬೇಡಿಕೆಗೂ ಸಂಗ್ರಹವಾಗುತ್ತಿರು ಕರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇದರಿಂದ ಗುತ್ತಿಗೆದಾರರ ಬಿಲ್‌ ಪಾವತಿ, ಹಳೆಯ ಬಾಕಿ ಚುಕ್ತಾ ಮಾಡಿಕೊಂಡು, ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ.

ಈ ಎಲ್ಲ ಅವ್ಯವಸ್ಥೆಗೆ ಹಿಂದೆ ಕಾರ್ಯನಿರ್ವಹಿಸಿದ ಹಾಗೂ ಹಾಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ಕಾರಣರಾಗಿದ್ದಾರೆ. ಕೆಲವೆಡೆ ಕಾಮಗಾರಿ ಮಾಡದೇ ಬಿಲ್ ಪಾವತಿ ಮಾಡಿರುವುದು ಗಮನಕ್ಕೆ ಬಂದಿದೆ. ಕಾರವಾರದಲ್ಲಿ ಸರ್ಕಾರಿ ನಿಯಮಾವಳಿ ಮೀರಿ ಗುತ್ತಿಗೆ ನೀಡಿರುವುದು ಕಂಡುಬಂದಿದೆ. ಇಡೀ ನಗರಸಭೆಯೇ ಇಂಥ ಕಾರ್ಯದಲ್ಲಿ ಭಾಗಿಯಾಗಿದೆ. ಯಾರೋ ಒಬ್ಬರ ಮೇಲೆ ಕ್ರಮ ವಹಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಕೆಲವು ಕಚೇರಿಗಳಲ್ಲಿ 10-15 ವರ್ಷಗಳಿಂದ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಅವರನ್ನು ವರ್ಗಾವಣೆ ಮಾಡಿದಲ್ಲಿ, ಒಂದಿಬ್ಬರು ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ವಹಿಸಿದಲ್ಲಿ ವ್ಯವಸ್ಥೆ ಸರಿ ದಾರಿಗೆ ಬರಲಿದೆ ಎಂದುಕೊಂಡಿದ್ದೇನೆ. ವ್ಯವಸ್ಥೆ ಸರಿ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು.

ನಗರಗಳಲ್ಲಿ ಆಸ್ತಿ ನೋಂದಣಿ ಹಾಗೂ ಪರಬಾರೆಗೆ ಇ ಸ್ವತ್ತಿನ ಸಮಸ್ಯೆಯಿಂದ ಉಂಟಾಗುತ್ತಿರುವ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಕಾರವಾರದ ಟ್ಯಾಗೋರ್‌ ಕಡಲ ತೀರದಲ್ಲಿರುವ ಚಪಲ್ ಯುದ್ಧ ವಿಮಾನ ವಸ್ತು ಸಂಗ್ರಹಾಲಯ ದುರಸ್ತಿಗೆ ಸುಮಾರು 85 ಲಕ್ಷ ರೂ. ಬೇಕು ಎಂದು ಅಂದಾಜಿಸಲಾಗಿದೆ. ನಗರೋತ್ಥಾನದ ಹಣ ಬಳಸಬಹುದೇ ಎಂದು ಯೋಜಿಸಲಾಗುತ್ತಿದೆ. ಬೇರೆ ಅನುದಾನ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

ಕರಡು ಮತದಾರರ ಪಟ್ಟಿ ಪ್ರಕಟ

ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಡಿಸೆಂಬರ್ 9 ರವರೆಗೂ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದರು.
ಮತದಾರರ ಪಟ್ಟಿ ಸಂಬಂಧ ರಾಜಕೀಯ ಪಕ್ಷಗಳ ಸಭೆ ನಡೆಸಿ ಅವರು ಮಾತನಾಡಿದರು. ಹೊಸದಾಗಿ ಹೆಸರು ಸೇರ್ಪಡೆಗಾಗಿ ನಮೂನೆ-6 ರಲ್ಲಿ ಮತ್ತು ಹೆಸರು ಕಡಿಮೆಗೊಳಿಸಲು ನಮೂನೆ-7 ರಲ್ಲಿ ಮತ್ತು ತಿದ್ದುಪಡಿ ಬಯಸಿದ್ದಲ್ಲಿ ನಮೂನೆ-8 ರಲ್ಲಿ ಸೂಕ್ತ ದಾಖಲೆಗಳೊಂದಿಗೆ ಸಂಬಂಧಪಟ್ಟ ಮತಗಟ್ಟೆ ಅಧಿಕಾರಿರವರಿಗೆ (ಬಿಎಲ್‌ಓ), ಸಹಾಯಕ ಮತದಾರರ ನೋಂದಣಾಧಿಕಾರಿ ( ತಹಸೀಲ್ದಾರ) ಕಚೇರಿಗೆ ಅರ್ಜಿ ಸಲ್ಲಿಸಬಹುದು ಎಂದರು.
ಹಳಿಯಾಳದಲ್ಲಿ 91,324 ಪುರುಷರು, 90,231 ಮಹಿಳೆಯರು, 2 ತೃತೀಯ ಲಿಂಗಿಗಳು ಸೇರಿ ಒಟ್ಟು -1,81,557 ಮತದಾರರಿದ್ದಾರೆ. ಕಾರವಾರದಲ್ಲಿ -1,08,637 ಪುರುಷರು, 1,11,799-ಮಹಿಳೆಯರು ಸೇರಿ ಒಟ್ಟು 2,20,436 ಮತದಾರರಿದ್ದಾರೆ. ಕುಮಟಾ-94,288 ಪುರುಷರು, 94,612 ಮಹಿಳೆಯರು, 3 ತೃತೀಯ ಲಿಂಗಿಗಳು ಸೇರಿ ಒಟ್ಟು -1,88,903 ಮತದಾರರಿದ್ದಾರೆ. ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ -1,13,302 ಪುರುಷರು, 1,10,027-ಮಹಿಳೆಯರು ಸೇರಿ ಒಟ್ಟು 2,23,329 ಮತದಾರರಿದ್ದಾರೆ. ಶಿರಸಿ-1,00,925 ಪುರುಷರು, 1,00,214- ಮಹಿಳೆಯರು, 2 ತೃತೀಯ ಲಿಂಗಿಗಳು ಸೇರಿ ಒಟ್ಟು 2,01,141 ಮತದಾರಿದ್ದಾರೆ. ಯಲ್ಲಾಪುರ -92,506 ಪುರುಷರು, 90,659 ಮಹಿಳೆಯರು, 1 ತೃತಿಯ ಲಿಂಗಿ ಸೇರಿ ಒಟ್ಟು 1,83,166 ಮತದಾರರಿದ್ದು, ಜಿಲ್ಲೆಯಲ್ಲಿ ಒಟ್ಟು 6,00,982 ಪುರುಷರು, 5,97,542 ಮಹಿಳೆಯರು ಹಾಗೂ 8 ತೃತೀಯ ಲಿಂಗದವರು ಸೇರಿ ಒಟ್ಟು 11,98,532 ಮತದಾರರಿದ್ದಾರೆ. 33,496 ಯುವ, 15,591 ಅಂಗವಿಕಲ, 4809 ವಿಐಪಿ ಮತದಾರರಿದ್ದಾರೆ ಎಂದು ಡಿಸಿ ಮಾಹಿತಿ ನೀಡಿದರು.