ಸಿಂಧನೂರು ತಾಲೂಕಿನ ಸಾಸಲಮರಿ ಗ್ರಾಮದಲ್ಲಿ ಅಕಾಲಿಕ ಮಳೆಯಿಂದ ಹಾನಿಗೀಡಾದ ಭತ್ತದ ಗದ್ದೆಗೆ ಶಾಸಕ ಹಂಪನಗೌಡ ಬಾದರ್ಲಿ ಭೇಟಿ ನೀಡಿ ಪರಿಶೀಲಿಸಿದರು. ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹ್ಮದ್, ಕಾಂಗ್ರೆಸ್ ಮುಖಂಡರಾದ ಬಸವರಾಜ ಹಿರೇಗೌಡರ, ರಾಮನಗೌಡ ಮಲ್ಕಾಪುರ ಇತರರಿದ್ದರು. 
ಜಿಲ್ಲೆ

ನಷ್ಟದ ಪರಿಹಾರ ವ್ಯವಸ್ಥೆಗೆ ಕ್ರಮ

ಸಿಂಧನೂರು: ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದಲ್ಲಿ ಭತ್ತದ ಬೆಳೆ ನಷ್ಟವಾಗಿದ್ದರಿಂದ ಸರ್ವೇ ನಡೆಯುತ್ತಿದ್ದು ಎರಡ್ಮೂರು ದಿನಗಳಲ್ಲಿ ಸರ್ಕಾರಕ್ಕೆ ವರದಿ ಕಳುಹಿಸಿ, ಶೀಘ್ರವೇ ರೈತರಿಗೆ ನಷ್ಟದ ಪರಿಹಾರ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.

ತಾಲೂಕಿನ ಸಾಸಲಮರಿ, ಬೂದಿವಾಳಕ್ಯಾಂಪ್, ಮಲ್ಕಾಪುರ, ಸಾಲುಗುಂದಾ, ಗೊರೇಬಾಳ, ಸಿಂಗಾಪುರ, ಜಾಲಿಹಾಳ, ಕನ್ನಾರಿ, ಕೆಂಗಲ್, ಉಪ್ಪಳ, ವೆಂಕಟೇಶ್ವರ ಕ್ಯಾಂಪ್, ಬೂದಿವಾಳ, ದಡೇಸುಗೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೆಳೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ರೈತರು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅಕಾಲಿಕ ಮಳೆಗೆ ತಾಲೂಕಿನಲ್ಲಿ ಅಂದಾಜು 7-8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಟಾವು ಹಂತದಲ್ಲಿದ್ದ ಭತ್ತದ ಬೆಳೆ ಹಾನಿಯಾಗಿದೆ. ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಈಗಾಗಲೇ ಕಂದಾಯ ಹಾಗೂ ಕೃಷಿ ಇಲಾಖೆ ಸಚಿವರೊಂದಿಗೆ ಚರ್ಚಿಸಿದ್ದು, ಜಂಟಿಯಾಗಿ ಸರ್ವೇ ಕಾರ್ಯ ನಡೆಯುತ್ತಿದೆ. ರೈತರು ತಮ್ಮ ಹೊಲಕ್ಕೆ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಸರಿಯಾದ ಮಾಹಿತಿ ನೀಡಬೇಕು. ವರದಿ ಸಿದ್ಧವಾದ ನಂತರ ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ಬಿಡುಗಡೆಗೆ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಭತ್ತದ ಬೆಳೆಗೆ ವಿಮೆ ಮಾಡಿಸಿದ ರೈತರು ಸಹ ಸಂಬಂಧಿಸಿದ ಕಂಪನಿಗಳಿಗೆ ದೂರು ನೀಡಬೇಕು. ವಿಮಾ ಕಂಪನಿಗಳ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಅವರೂ ಕೂಡ ಪರಿಹಾರ ನೀಡಬಹುದು. ದೂರು ದಾಖಲಿಸಲು ರೈತರು ಮುಂದಾಗಬೇಕು ಎಂದು ಹೇಳಿದರು. ಕಂದಾಯ ಅಧಿಕಾರಿ ವೀರೇಸ ಹೂವಿನಭಾವಿ, ಗ್ರಾಮ ಆಡಳಿತಾಧಿಕಾರಿ ಮೋಬಿನ, ಕೃಷಿ ಅಧಿಕಾರಿ ಬಸವರಾಜ ರೆಡ್ಡಿ, ರೈತರು ಇದ್ದರು.