ಮೈಸೂರು: ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಚಾಲಕರ ವಿರೋಧಿಯಾದ ಕಾಯ್ದೆ ವಿರುದ್ಧ ಜ.17ರಂದು ಲಾರಿ ಮಾಲೀಕರ ಒಕ್ಕೂಟದಿಂದ ಮುಷ್ಕರ ನಡೆಸಲಾಗುತ್ತದೆ ಎಂದು ಮೈಸೂರು ಜಿಲ್ಲಾ ಲಾರಿ ಮಾಲೀಕರ ಹಾಗೂ ಚಾಲಕರ ಒಕ್ಕೂಟದ ಅಧ್ಯಕ್ಷ ಕೋದಂಡರಾಮ ತಿಳಿಸಿದರು.
ಸಂಘದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಈ ಕಾಯ್ದೆಯಿಂದ ಕೇವಲ ಲಾರಿ ಮಾಲೀಕರಿಗೆ ಮಾತ್ರವಲ್ಲ, ಎಲ್ಲ ವಾಹನ ಸವಾರರಿಗೂ ತೊಂದರೆಯಾಗಲಿದೆ. ನಾಗರಿಕ ಸುರಕ್ಷತಾ 2023ರ ವಿಧೇಯಕ ವಾಹನ ಚಾಲಕರಿಗೆ ಮಾರಕವಾಗಿದೆ. ಈಗಾಗಲೇ ವಾಹನ ಚಾಲಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕಾಯ್ದೆ ಜಾರಿಯಾದರೆ ಮತ್ತಷ್ಟು ಸಮಸ್ಯೆಯಾಗಲಿದೆ. ಹೀಗಾಗಿ ಈ ವಿಧೇಯಕವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಅಂದು ಅಗತ್ಯ ವಸ್ತುಗಳಾದ ತರಕಾರಿ, ಔಷಧಿ, ಹಾಲು ಬಿಟ್ಟು ಉಳಿದ ಸರಕು ಸಾಗಣೆ ವಾಹನಗಳು ರಸ್ತೆಗೆ ಇಳಿಯುದಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರಿಯುತ್ತದೆ ಎಂದು ತಿಳಿಸಿದರು.
ರಾಜ್ಯ ಮಟ್ಟದ ಲಾರಿ ಮಾಲೀಕರ ಅಧ್ಯಕ್ಷ ನವೀನ್ ರೆಡ್ಡಿ, ಮುಖಂಡರಾದ ಅಬ್ದುಲ್ ಖಾದರ್ ಶಾಹಿದ್, ಪೃಥ್ವಿರಾಜ್, ರಾಜೇಂದ್ರ, ನಾಗಚಂದ್ರ, ವಜ್ರೇಗೌಡ, ಶ್ರೀನಿವಾಸ್ ರಾವ್, ಅಭಿಷೇಕ್ ಭಾಗವಹಿಸಿದ್ದರು.