ಜಿಲ್ಲೆ

ಏ.14ರ ಮಧ್ಯರಾತ್ರಿಯಿಂದ ರಾಜ್ಯದಲ್ಲಿ ಲಾರಿ ಮಾಲೀಕರ ಮುಷ್ಕರ: ಡೀಸೆಲ್​ ದರ ಏರಿಕೆ ವಿರೋಧಿಸಿ ಪ್ರತಿಭಟನೆ

ಬೆಂಗಳೂರು: ಡೀಸೆಲ್​, ಟೋಲ್​, ಎಫ್​​​ಸಿ ಶುಲ್ಕ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಫೆಡರೇಷನ್​ ಆಫ್​​ ಕರ್ನಾಟಕ ಸ್ಟೇಟ್​ ಲಾರಿ ಓನರ್ಸ್​ ಆಂಡ್​ ಏಜೆಂಟ್​ ಅಸೋಸಿಯೇಷನ್​ ಸೋಮವಾರ( ಏ.14) ಮಧ್ಯರಾತ್ರಿ ಮುಷ್ಕರಕ್ಕೆ ಕರೆ ಕೊಟ್ಟಿದೆ. ಹಲವು ಸಂಘಟನೆಗಳಿಂದ ಈಗಾಗಲೇ ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಂಡಿವೆ. ಕ್ಯಾಬ್​ ಚಾಲಕರ ಯೂನಿಗಳಿಂದಲೂ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ. ಹೀಗಾಗಿ, ಸರಕು ಸಾಗಾಣೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.

2024ರ ಜೂನ್​ನಲ್ಲಿ ರಾಜ್ಯ ಸರ್ಕಾರ ಪ್ರತಿ ಲೀ.ಡೀಸೆಲ್​ ಮೇಲೆ 3 ರೂ.ಹೆಚ್ಚಿಸಿತ್ತು. ಇದೀಗ ಯಾವುದೇ ಮೂನ್ಸೂಚನೆ ನೀಡದೆ ಏ.1ರಿಂದ ಏಕಾಏಕಿ 2 ರೂ.ದರ ಏರಿಸಿ ಲಾರಿ ಉದ್ಯಮದ ಮೇಲೆ ಬರೆ ಎಳೆದಿದೆ. ಗಡಿ ಭಾಗದ ರಾಜ್ಯಗಳಲ್ಲಿ ಡೀಸೆಲ್​ ಬೆಲೆ ರಾಜ್ಯಕ್ಕಿಂತ ಹೆಚ್ಚು ಇದ್ದಾಗ, ಹೊರ ರಾಜ್ಯದ ಲಾರಿಗಳು ನಮ್ಮ ರಾಜ್ಯದಲ್ಲಿ ಲಾಂತರ ಲೀಟರ್​ ಡೀಸೆಲ್​ ತುಂಬಿಸಿಕೊಳ್ಳುತ್ತಿದ್ದವು. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಯಥೇಚ್ಛವಾಗಿ ಆದಾಯ ಹರಿದು ಬರುತ್ತಿತ್ತು. ಇದೀಗ ಬೆಲೆ ಹೆಚ್ಚಳದಿಂದಾಗಿ ನೆರೆಯ ರಾಜ್ಯಗಳ ಲಾರಿಗಳು ಇಂಧನ ತುಂಬಿಸಿಕೊಳ್ಳುವದನ್ನು ನಿಲ್ಲಿಸಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದಾಯ ಕುಸಿತವಾಗಿದೆ. ಹೀಗಾಗಿ, ಡೀಸೆಲ್​ ದರವನ್ನು ಕಡಿಮೆ ಮಾಡಬೇಕೆಂದು ಸಂಘಟನೆಗಳು ಒತ್ತಾಯಿಸಿವೆ.

ಸಂಘದ ಅಧ್ಯಕ್ಷ ಡಾ.ಜಿ.ಆರ್​.ಷಣ್ಮುಗಪ್ಪ ಮಾತನಾಡಿ, ರಾಜ್ಯದಲ್ಲಿ ಒಟ್ಟು 18 ರಾಜ್ಯ ಹೆದ್ದಾರಿ ಟೋಲ್​ಗಳಲ್ಲಿ ಶುಲ್ಕ ಸಂಗ್ರಹಿಸಲಾಗುತ್ತಿದೆ. ಪ್ರತಿ ವಾಹನಕ್ಕೆ ರಸ್ತೆ ತೆರಿಗೆ, ಡೀಸೆಲ್​ ಮೇಲೆ ರಸ್ತೆ ಸೆಸ್​ ಕಟ್ಟುತ್ತಿದ್ದೇವೆ. ದೇಶದ ಯಾವುದೇ ರಾಜ್ಯಗಳಲ್ಲೂ ಟೋಲ್​ ಇರುವುದಿಲ್ಲ. ಆದರೆ, ನಮ್ಮ ರಾಜ್ಯದಲ್ಲಿ ಮಾತ್ರ ಮಲತಾಯಿ ಧೋರಣೆ ತೋರಿ ವಾಹನ ಚಾಲಕರಿಗೆ ಮೂಲಸೌಕರ್ಯ,ರಸ್ತೆ ಅಪಘಾತ ತಡೆಯಲು ಕ್ರಮ ತೆಗೆದುಕೊಳ್ಳದೆ ಕೇವಲ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದ್ದರಿಂದ, ಟೋಲ್​ ಸಂಗ್ರಹ ಶುಲ್ಕ ಕೈಬಿಡಬೇಕೆಂದು ಸರ್ಕಾರಕ್ಕೆ ಷಣ್ಮುಗಪ್ಪ ಮನವಿ ಮಾಡಿದರು.

ಬಾರ್ಡರ್​ ಚೆಕ್​ಪೋಸ್ಟ್​ ತೆರವುಗೊಳಿಸಿ: ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಬಾರ್ಡರ್​ ಚೆಕ್​ಪೋಸ್ಟ್​ಗಳನ್ನು ರದ್ದು ಮಾಡಲಾಗಿದೆ. ಏ.15ರಿಂದ ಮಹಾರಾಷ್ಟ್ರದ ಚೆಕ್​ಪೋಸ್ಟ್​ನ್ನು ಅಲ್ಲಿನ ಸರ್ಕಾರ ರದ್ದುಗೊಳಿಸಿದೆ. ಕರ್ನಾಟಕದ ಗಡಿ ಭಾಗದಲ್ಲೂ ಇಲ್ಲಿನ ಸರ್ಕಾರ ತೆಗೆದು ಹಾಕಬೇಕು. 15 ವರ್ಷ ಬಳಿಕ ಎ್​ಸಿ ಶುಲ್ಕವನ್ನು ಏಕಾಏಕಿ 15 ಸಾವಿರ ರೂ.ಏರಿಸಲು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಈ ಶುಲ್ಕವು ರಾಜ್ಯ ಹಣಕಾಸಿಗೆ ಸಂಬಂಧಪಟ್ಟಿರುವ ಹಿನ್ನೆಲೆಯಲ್ಲಿ ಇದನ್ನು ಕಾರ್ಯರೂಪಕ್ಕೆ ತರಬಾರದು ಎಂದು ಲಾರಿ ಮಾಲೀಕರ ಸಂಟನೆಗಳು ಮನವಿ ಮಾಡಿಕೊಂಡಿವೆ. ಬೆಂಗಳೂರು ಸೇರಿ ರಾಜ್ಯದ ಹಲವು ನಗರದ ಒಳಗಡೆ ಸರಕು ಸಾಗಾಣೆ ವಾಹನಗಳನ್ನು ನಿಷೇಧಿಸಿ ಐದು ಗಂಟೆ ಮಾತ್ರ ಸಮಯ ನೀಡಲಾಗಿದೆ. ಈ ಆದೇಶವು ಲಾರಿ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಆದ್ದರಿಂದ, "ನೋ ಎಂಟ್ರಿ' ಹೆಸರಿನಲ್ಲಿ ಪೊಲೀಸರು ಚಾಲಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಈವರೆಗೆ ನಮ್ಮ ಜೊತೆ ಮಾತುಕತೆ ನಡೆಸಿಲ್ಲ.ಹಲವು ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿದಿದೆ.ಯಾವುದೇ ಕಾರಣಕ್ಕೂ ಮುಷ್ಕರವನ್ನು ಹಿಂಪಡೆಯಲ್ಲ. ಲಾರಿಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

| ಡಾ.ಜಿ.ಆರ್​.ಷಣ್ಮುಗಪ್ಪ,ಅಧ್ಯಕ್ಷ

ಫೆಡರೇಷನ್​ ಆಫ್  ಕರ್ನಾಟಕ ಸ್ಟೇಟ್​ ಲಾರಿ ಓನರ್ಸ್​ ಆಂಡ್​ ಏಜೆಂಟ್​ ಅಸೋಸಿಯೇಷನ್​.