ಮಂಡ್ಯ: ಕೇಂದ್ರ ಸರ್ಕಾರ ಜಾರಿಗೆ ತರಲೊರಟ್ಟಿರುವ ಹಿಟ್ ಆ್ಯಂಡ್ ರನ್ ಪ್ರಕರಣಗಳ ಕಾಯ್ದೆ 106/1 ಮತ್ತು 106/2 ಅನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ನಗರದ ಫ್ಯಾಕ್ಟರಿ ವೃತ್ತದಲ್ಲಿ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದರು.
ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್, ರೈಲ್ವೆ ಗೂಡ್ಸ್‌ಶೆಡ್ ಲಾರಿ ಮತ್ತು ಸ್ಥಳೀಯ ಲಾರಿ ಮಾಲೀಕರ ಸಂಘ, ಜಿಲ್ಲಾ ಲಾರಿ ಮಾಲೀಕರ ಸಂಘ, ಮಿನಿ ಸರಕು ಸಾಗಾಣಿಕೆ ಮಾಲೀಕರ ಸಂಘ, ಮದ್ದೂರು ತಾಲೂಕು ಸರಕು ಸಾಗಾಣಿಕೆ ವಾಹನ ಮಾಲೀಕರ ಸಂಘದ ಪದಾಧಿಕಾರಿಗಳು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಹಿಟ್ ಆ್ಯಂಡ್ ರನ್ ಪ್ರಕರಣಗಳ ಕಾಯ್ದೆ 106/1 ಮತ್ತು 106/2 ದಿಂದಾಗಿ ಸಾಕಷ್ಟು ಸಮಸ್ಯೆ ಎದುರಿಸುವಂತಾಗುತ್ತದೆ. ಅನಿರೀಕ್ಷಿತವಾಗಿ ಸಂಭವಿಸುವ ಅಪಘಾತ ಲಕ್ಷಾಂತರ ರೂ ದಂಡ ಹಾಗೂ ಜೈಲುವಾಸ ವಿಧಿಸಲಾಗುತ್ತಿದೆ. ಇದರಿಂದಾಗಿ ಚಾಲಕರು ವೃತ್ತಿಯಿಂದ ಹೊರಗುಳಿಯುವಂತಾಗಿದೆ. ಈಗಾಗಲೇ ಸಂಕಷ್ಟದಲ್ಲಿರುವ ಲಾರಿ ಮಾಲೀಕರಿಗೆ ಮತ್ತಷ್ಟು ಸಮಸ್ಯೆಯಾಗಲಿದೆ. ಆದ್ದರಿಂದ ಕಾಯ್ದೆಯನ್ನು ಕೇಂದ್ರಸರ್ಕಾರ ಹಿಂಪಡೆಯಬೇಕು. ಇನ್ನು ರಾಜ್ಯಸರ್ಕಾರಕ್ಕೂ ನಮ್ಮ ಬೇಡಿಕೆ ಇದೆ. ಅದರಂತೆ ಕರ್ನಾಟಕದ ಗಡಿ ಭಾಗದಲ್ಲಿರುವ ಸಾರಿಗೆ ಇಲಾಖೆ ತಪಾಸಣೆ ಠಾಣೆಯನ್ನು ತೆಗೆದು ಹಾಕಬೇಕು. ಓವರ್ ಡೈಮೆನ್ಶನ್‌ಗೆ ವಿಧಿಸುತ್ತಿರುವ 20 ಸಾವಿರ ರೂ ದಂಡವನ್ನು ಕಡಿಮೆ ಮಾಡಬೇಕು. ಕಪ್ಪುಪಟ್ಟಿ ಹೆಸರಲ್ಲಿ ವಾಣಿಜ್ಯ ವಾಹನಕ್ಕೆ ಎಫ್‌ಸಿ ಮತ್ತು ಪರ್ಮಿಟ್ ನವೀಕರಣ ಮಾಡಿಕೊಳಲು ನಿರಾಕರಿಸುವುದನ್ನು ನಿಲ್ಲಿಸಬೇಕು. ಇದಲ್ಲದೆ ಪೊಲೀಸ್ ಇಲಾಖೆಗೂ ಹಲವು ಮನವಿ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿಟ್ ಆ್ಯಂಡ್ ರನ್ ಪ್ರಕರಣಗಳ ಕಾಯ್ದೆ 106/1 ಮತ್ತು 106/2 ಲಾರಿ ಮಾಲೀಕರಿಗಷ್ಟೇ ಅನ್ವಯವಾಗುವುದಿಲ್ಲ. ಬದಲಿಗೆ ಚಾಲನಾ ಪರವಾನಗಿ ಹೊಂದಿರುವ ಹಾಗೂ ವಾಹನ ಚಲಾಯಿಸುವ ಎಲ್ಲರೂ ಒಳಪಡಲಿದ್ದಾರೆ. ಆದ್ದರಿಂದ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತೇವೆ. ಪ್ರತಿ ವಾಹನ ಚಾಲಕರನ್ನು ನಮ್ಮೊಂದಿಗೆ ಒಗ್ಗೂಡಿಸಿಕೊಳ್ಳುತ್ತೇವೆ. ಮುಂದಿನ ಹೋರಾಟದ ಬಗ್ಗೆ ಫೆಡರೇಷನ್‌ನ ರಾಜ್ಯಾಧ್ಯಕ್ಷರು ನಿರ್ಧರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರತಿಭಟನೆಯಲ್ಲಿ ಅಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿ ಎಚ್.ಎಸ್.ಸಂಜಯ್‌ಕುಮಾರ್, ವಿವಿಧ ಸಂಘಟನೆಗಳ ಸುನೀಲ್‌ಕುಮಾರ್, ಸತೀಶ್, ಎಚ್.ಮಹೇಶ್, ಯೋಗೇಶ್, ಖಲೀಲ್ ಅಹಮದ್, ವೆಂಕಟೇಶ್ ಇತರರಿದ್ದರು.