ಜಿಲ್ಲೆ

ರಸ್ತೆಯಲ್ಲಿ ಉರುಳಿ ಬಿದ್ದ ಲಾರಿ

ಕಿರಣ್ ಗೌಡ.ಜಿ

ಸಿದ್ದಾಪುರ: ಸಿದ್ದಾಪುರ ಸಮೀಪದ ಅಂಬೇಡ್ಕರ್ ನಗರ ಬಳಿ ವಿರಾಜಪೇಟೆ- ಸಿದ್ದಾಪುರ ಮಾರ್ಗದ ಮುಖ್ಯ ರಸ್ತೆಯಲ್ಲಿ ಮರ ಸಾಗಿಸುತ್ತಿದ್ದ ಲಾರಿ ಉರುಳಿ ಬಿದ್ದಿದೆ.

ಮಂಗಳವಾರ ರಾತ್ರಿ ಮರದ ದಿಮ್ಮಿಗಳನ್ನು ತುಂಬಿ ವಿರಾಜಪೇಟೆ ರಸ್ತೆಯಿಂದ ಸಿದ್ದಾಪುರ ಮಾರ್ಗಕ್ಕೆ ತೆರಳುತ್ತಿದ್ದ ವೇಳೆ ಅಂಬೇಡ್ಕರ್ ನಗರದ ಬಳಿ ಸೇತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದ ರಸ್ತೆಯ ಗುಂಡಿಯಲ್ಲಿ ಸಿಲುಕಿ ಲಾರಿ ಉರುಳಿ ಬಿದ್ದಿದ್ದು, ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಿದ್ದಾಪುರ- ವಿರಾಜಪೇಟೆ ಮಾರ್ಗದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾದ ಹಿನ್ನೆಲೆ ತಕ್ಷಣ ರಾತ್ರಿಯೇ ಮರದ ದಿಮ್ಮಿಗಳನ್ನು ಸ್ಥಳಾಂತರ ಮಾಡಲಾಯಿತು. ಬೆಳಗ್ಗೆ ಜೆಸಿಬಿ ಕ್ರೇನ್ ಬಳಸಿ ಲಾರಿಯನ್ನೂ ಮೇಲತ್ತಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು. ಸಿದ್ದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಳೆದ ಏಳು ತಿಂಗಳಿಂದ ಸಿದ್ದಾಪುರ ಮುಖ್ಯ ರಸ್ತೆಯ ಸೇತುವೆ ಹಾಗೂ ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಜತೆಗೆ ಕೇರಳ, ಹಾಸನ, ಕೊಡಗು ಮಾರ್ಗದ ಮುಖ್ಯ ರಸ್ತೆಯಾಗಿದ್ದು ವಾಹನ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ. ಅಧಿಕಾರಿಗಳು ರಸ್ತೆ ಅಭಿವೃದ್ಧಿ ಕಾಮಗಾರಿ ಬಗ್ಗೆ ನಿರ್ಲಕ್ಷೃ ವಹಿಸುತ್ತಿರುವ ಪರಿಣಾಮವೇ ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.