ಜಿಲ್ಲೆ

ಲಾರಿ ಅಪಘಾತ ದಲ್ಲಿ ಇಬ್ಬರ ಸಾವು

ಹರ್ಷ ನ.ಪುರೋಹಿತ

ಚಿತ್ರದುರ್ಗ: ಐಮಂಗಲದ ಬಳಿ ಪಾಲವ್ವನಹಳ್ಳಿ ಗೇಟ್ ಸಮೀಪ ಶುಕ್ರವಾರ ತಡ ರಾತ್ರಿ ಲಾರಿಗೆ ಮತ್ತೊಂದು ಲಾರಿ ಹಿಂದಿನಿಂದ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಮೀರಜ್‌ನ ಟೋಯಿಂಗ್ ಲಾರಿ ಚಾಲಕರಾದ ಪ್ರಕಾಶ್ ಪಾಟೀಲ್, ವಿಜಯ್‌ಲಂಬೆ ಮೃತಪಟ್ಟವರು.

ತಮಿಳುನಾಡಿನ ಹರಿಗಣೇಶನ್ ಎಂಬುವವರು ಮೀರಜ್‌ನಲ್ಲಿ ಹಳೆಯ ಮರ್ಸಿಡಿಸ್ ಬೆಂಜ್ ಕಾರನ್ನು ಖರೀದಿ ಮಾಡಿ ಟೋಯಿಂಗ್ ವಾಹನದಲ್ಲಿ ಹಾಕಿಕೊಂಡು ಚಿತ್ರದುರ್ಗದ ಮೂಲಕ ತಮಿಳುನಾಡಿಗೆ ಹಿಂತಿರುಗುತ್ತಿದ್ದರು.

ಪಾಲವ್ವನಹಳ್ಳಿ ಗೇಟ್‌ಬಳಿ ಹೆದ್ದಾರಿ 48ರಲ್ಲಿ ಹಿಂದಿನಿಂದ ಅತಿವೇಗದಿಂದ ಬಂದ ಲಾರಿ ಚಾಲಕ ಟೋಯಿಂಗ್ ವಾಹನವನ್ನು ಓವರ್‌ಟೇಕ್ ಮಾಡಿ, ಯಾವುದೇ ಸೂಚನೆ ನೀಡದೆ ಢಾಬಾ ಕಡೆಗೆ ವಾಹನ ತಿರುಗಿಸಿದಾಗ ಅಪಘಾತ ಸಂಭವಿಸಿದೆ.

ಟೋಯಿಂಗ್ ಲಾರಿ ನಿಯಂತ್ರಣಕ್ಕೆ ಸಿಗದೆ ಮುಂದಿನ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಹರಿಗಣೇಶನ್ ಐಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.