ಸೊರಬ ತಾಲೂಕಿನ ಉಳವಿ ಹೋಬಳಿ ಕಪ್ಪಗಳಲೆ ಗ್ರಾಮದಲ್ಲಿ ಏರ್ಪಡಿಸಿದ್ದ ಶ್ರೀ ಶನೈಶ್ಚರ ಸ್ವಾಮಿಯ 50ನೇ ವರ್ಷದ ವರ್ಧಂತಿ ಉತ್ಸವ ಹಾಗೂ ಶನೈಶ್ಚರ ಜಾತ್ರಾ ಮಹೋತ್ಸವನ್ನು ಶ್ರೀ ಕ್ಷೇತ್ರ ಕಾರ್ತೀಕೆಯ ಪೀಠದ ಯೋಗೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಇದ್ದರು. 
ಜಿಲ್ಲೆ

ನಿಸ್ವಾರ್ಥ ಸೇವೆಯಿಂದ ಭಗವಂತನ ಅನುಗ್ರಹ

Shivamogga - Desk - Vinayakumar D B

ಸೊರಬ: ಜೀವಿತದ ಅವಧಿಯಲ್ಲಿ ಆದರ್ಶ ಬದುಕು ನಡೆಸಿದಾಗ ಜನ್ಮ ಸಾರ್ಥಕವಾಗುತ್ತದೆ. ಆಧ್ಯಾತ್ಮದ ವಿಷಯದಲ್ಲಿ ನಿಸ್ವಾರ್ಥ ಸೇವೆ, ಭಕ್ತಿ ಮತ್ತು ನಿಷ್ಠೆ ಹೊಂದಿದಾಗ ದೇವರ ಕೃಪೆಗೆ ಪಾತ್ರರಾಗಬಹುದು ಎಂದು ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

ತಾಲೂಕಿನ ಉಳವಿ ಹೋಬಳಿಯ ಕಪ್ಪಗಳಲೆ ಗ್ರಾಮದಲ್ಲಿ ಶ್ರೀ ಶನೈಶ್ಚರ ಸ್ವಾಮಿಯ 50ನೇ ವರ್ಷದ ವರ್ಧಂತಿ ಉತ್ಸವ ಹಾಗೂ ಶನೈಶ್ಚರ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ದೇಶದ ಐತಿಹಾಸಿಕ ಪರಂಪರೆಯಲ್ಲಿ ದೇವಸ್ಥಾನ, ಮಠ ಮಂದಿರಗಳಿಗೆ ವಿಶೇಷ ಸ್ಥಾನವಿದೆ. ಆಧ್ಯಾತ್ಮ ಮಾರ್ಗದಲ್ಲಿ ಬದುಕು ಮುನ್ನಡೆಸಬೇಕು ಎಂದು ತಿಳಿಸಿದರು.
ಭಗವಂತನ ಸತ್ಯ ಸ್ವರೂಪವನ್ನು ಸಮಾಜಕ್ಕೆ ತಿಳಿಸುವಲ್ಲಿ ಧಾರ್ಮಿಕ ಆಚರಣೆಗಳು ಪೂರಕವಾಗಿದೆ. ಮನಸ್ಸು ಶುದ್ಧವಾಗಿರಿಸಿ ದಾನ, ಧರ್ಮ, ಪರೋಪಕಾರದ ಬಗ್ಗೆ ಆಲೋಚನೆ ನಡೆಸಬೇಕು. ಸಾಮೂಹಿಕವಾಗಿ ಧಾರ್ಮಿಕ ಆಚರಣೆಗಳನ್ನು ಶ್ರದ್ಧೆ ಭಕ್ತಿಯಿಂದ ಪಾಲಿಸಬೇಕು ಎಂದರು.
ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ತುಕ್ಕಪ್ಪ ಮಾತನಾಡಿ, ಜೀವನದಲ್ಲಿ ಧರ್ಮದ ತಳಹದಿ ಮೇಲೆ ಕಾರ್ಯಗಳನ್ನು ನಡೆಸಿದಾಗ ನೆಮ್ಮದಿ ಕಾಣಬಹುದು. ಧರ್ಮಪಾಲಕ ಶನೈಶ್ಚರ ಸ್ವಾಮಿಯು ಅದ್ಭುತ ಶಕ್ತಿಯಾಗಿದ್ದು, ಪ್ರತಿಯೊಬ್ಬರು ಧಾರ್ಮಿಕ ಆಚರಣೆ ಮಾಡುವ ಜತೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಧಾರ್ಮಿಕ ಆಚರಣೆಗಳಿಂದ ಸಮಾಜಕ್ಕೆ ಒಳಿತಾಗುತ್ತದೆ ಎಂದು ಹೇಳಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಶಿಕ್ಷಣಕ್ಕೆ ಒತ್ತು ನೀಡುವ ಜತೆಯಲ್ಲಿ ಸಾರ್ವಜನಿಕರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದ್ದರು. ನಾವು ಮಾಡುವ ಕಾರ್ಯದಲ್ಲಿ ಆತ್ಮವಿಶ್ವಾಸ ಇದ್ದಾಗ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಿಗಂದೂರು ಧರ್ಮದರ್ಶಿ ಡಾ. ರಾಮಪ್ಪ ಮಾತನಾಡಿ, ದೇವಾಲಯಗಳು ಧಾರ್ಮಿಕ ಕೇಂದ್ರದ ಸಂಕೇತ. ಪ್ರತಿಯೊಬ್ಬರು ಧರ್ಮದ ನೆಲೆಯಲ್ಲಿ ಜಾಗೃತಗೊಳ್ಳುವ ಅಗತ್ಯವಿದೆ. ಆಗ ಮಾತ್ರ ಧರ್ಮ ಪರಂಪರೆ ಉಳಿಯಲು ಸಾಧ್ಯ ಎಂದರು.